ನವದೆಹಲಿ,ಏ.12- ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ರಾಜಕೀಯ ಪಕ್ಷಗಳ ಸದನ ನಾಯಕರಿಗೆ ಪತ್ರ ಬರೆದಿದ್ದು, ನಾರಿ ಶಕ್ತಿ ವಂದನ್‌ಅಧಿನಿಯಮ್ ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕೆ ಬೆಂಬಲ ನೀಡಬೇಕೆಂದು ಕೋರಿದ್ದಾರೆ.
ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ ಲೋಕಸಭೆ ಮತ್ತು ರಾಜ್ಯಸಭೆಯ ಸದನದ ನಾಯಕರಿಗೆ ಬರೆದ ಪತ್ರದಲ್ಲಿ, ಅಧಿಕೃತವಾಗಿ ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿ ಕಾನೂನಿನ ತಿದ್ದುಪಡಿಗಳನ್ನು ಅಂಗೀಕರಿಸಲು ಎಲ್ಲಾ ಸದಸ್ಯರು ಒಂದೇ ಧ್ವನಿಯಲ್ಲಿ ಒಗ್ಗೂಡಬೇಕೆಂದು ಮೋದಿ ಮನವಿ ಮಾಡಿಕೊಂಡಿದ್ದಾರೆ.
ವಿಸ್ತೃತ ಚರ್ಚೆಗಳ ನಂತರ, ದೇಶಾದ್ಯಂತ ನಾರಿ ಶಕ್ತಿ ವಂದನ ಅಧಿನಿಯಮವನ್ನು ಅದರ ನಿಜವಾದ ಉತ್ಸಾಹದಲ್ಲಿ ಜಾರಿಗೆ ತರುವ ಸಮಯ ಬಂದಿದೆ ಎಂದು ನಾವು ತೀರ್ಮಾನಕ್ಕೆ ಬಂದಿದ್ದೇವೆ. 2029 ರ ಲೋಕಸಭಾ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿಯೊಂದಿಗೆ ನಡೆಸುವುದು ಕಡ್ಡಾಯವಾಗಿದೆ ಎಂದು ಪ್ರಧಾನಿ ಏ.11 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಏ.16 ರಿಂದ ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಸಂಬಂಧಿಸಿದ ಐತಿಹಾಸಿಕ ಚರ್ಚೆ ಸಂಸತ್ತಿನಲ್ಲಿ ನಡೆಯಲಿದೆ. ಈ ವಿಶೇಷ ಅಧಿವೇಶನವು ನಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಒಂದು ಅವಕಾಶವಾಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲು ನಮ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಲು ಇದು ಒಂದು ಕ್ಷಣವಾಗಿದೆ. ಈ ಉತ್ಸಾಹ ಮತ್ತು ಉದ್ದೇಶದಿಂದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದಿದ್ದಾರೆ.
ತಮ ಪತ್ರದಲ್ಲಿ ಪ್ರಧಾನಿ ಮೋದಿ ಅವರು, ಕಾನೂನನ್ನು ಪೂರ್ಣವಾಗಿ ಜಾರಿಗೆ ತರುವ ಸಮಯ ಬಂದಿದೆ. 2029 ರ ಲೋಕಸಭಾ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರುವ ಮೂಲಕ ನಡೆಸುವುದು ಮುಖ್ಯ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಪಕ್ಷಾತೀತವಾಗಿ ಬೆಂಬಲ ಕೊಡಿ :
ಪಕ್ಷಪಾತ ರಾಜಕೀಯವನ್ನು ಮೀರಿದ ಮತ್ತು ಮಹಿಳಾ ಸಬಲೀಕರಣದ ಪ್ರಯತ್ನ ಇದಾಗಿದೆ ಎಂದು ಹೇಳಿರುವ ಪ್ರಧಾನಿ ಮೋದಿ, ಉಭಯ ಸದನಗಳ ಸಂಸತ್ ಸದಸ್ಯರು ಈ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಬೆಂಬಲಿಸಬೇಕು. ಮಹಿಳಾ ಮೀಸಲಾತಿ ಕಾಯ್ದೆಯು ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ 816ಕ್ಕೆ ಹೆಚ್ಚಳವನ್ನು ಖಚಿತಪಡಿಸುತ್ತದೆ, ಅದರಲ್ಲಿ 273 ಮಹಿಳೆಯರಿಗೆ ಮೀಸಲಾಗಿರುತ್ತವೆ. 2023 ರಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಕಾಯ್ದೆಯನ್ನು ತರಲಾಗಿತ್ತು.
ಆದರೆ, 2027 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಪೂರ್ಣಗೊಂಡ ನಂತರವೇ ಮಹಿಳಾ ಕೋಟಾ ಜಾರಿಗೆ ಬರುತ್ತಿತ್ತು. ಇದರರ್ಥ 2034 ರ ಮೊದಲು ಮೀಸಲಾತಿ ಜಾರಿಗೆ ಬರುತ್ತಿರಲಿಲ್ಲ. ಕಾನೂನು ಹಾಗೆಯೇ ಉಳಿದಿದೆ. 2029 ರ ಲೋಕಸಭಾ ಚುನಾವಣೆಯಿಂದ ಇದನ್ನು ಜಾರಿಗೆ ತರಲು, ನಾರಿ ಶಕ್ತಿ ವಂದನ ಅಧಿನಿಯಮದಲ್ಲಿ ಬದಲಾವಣೆಗಳ ಅಗತ್ಯವಿತ್ತು. ಆದ್ದರಿಂದ ಕಾನೂನಿಗೆ ತಿದ್ದುಪಡಿಗಳನ್ನು ಅಂಗೀಕರಿಸಲು ಸರ್ಕಾರ ವಿಶೇಷ ಅಧಿವೇಶನವನ್ನು ಕರೆದಿದೆ.
ವಿಶೇಷವೆಂದರೆ, ಬಿಜೆಪಿ ತನ್ನ ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ಏ.16 ರಿಂದ 18 ರವರೆಗೆ ಸದನದಲ್ಲಿ ಹಾಜರಿರುವಂತೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ. ನಾರಿ ಶಕ್ತಿ ವಂದನ್ ಅಧಿನಿಯಮ್ (106 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ, 2023) ಅನ್ನು ಸೆಪ್ಟೆಂಬರ್ 2023 ರಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಲಾಗಿತ್ತು.
