Tuesday, April 14, 2026
Homeರಾಜ್ಯರಾಜ್ಯದ ಆರ್ಥಿಕತೆ ಸದೃಢವಾಗಿದೆ : ಸಿಎಂ ಸಿದ್ದರಾಮಯ್ಯ

ರಾಜ್ಯದ ಆರ್ಥಿಕತೆ ಸದೃಢವಾಗಿದೆ : ಸಿಎಂ ಸಿದ್ದರಾಮಯ್ಯ

State's economy is strong: CM Siddaramaiah

ಚಿಕ್ಕಮಗಳೂರು,ಏ.14- ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದವರಿಗೆ ನಮ ಸಾಧನೆಯೇ ಉತ್ತರವಾಗಿದ್ದು, ಕೇಂದ್ರ ಸರ್ಕಾರಕ್ಕಿಂತಲೂ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನರಸಿಂಹರಾಜಪುರ ತಾಲ್ಲೂಕಿನ ಹಿಳುವಳ್ಳಿ ಗ್ರಾಮದ ಟಿ.ಬಿ.ಸರ್ಕಲ್‌ ಬಳಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಂದೂರು ಗ್ರಾಮದಿಂದ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ಭದ್ರಾ ಹಿನ್ನೀರಿನಲ್ಲಿ ನಿರ್ಮಿಸಿರುವ ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದದರು.

2023ರ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಗಳಿಗಾಗಿ ಇದುವರೆಗೆ ಸುಮಾರು 1,31,000 ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಹಲವರು ಟೀಕಿಸಿದ್ದರು. ಆದರೆ ಯೋಜನೆಗಳು ಜಾರಿಯಾಗಿ ಮೂರು ವರ್ಷಗಳಾದರೂ ರಾಜ್ಯದ ಆರ್ಥಿಕತೆ ಭದ್ರವಾಗಿದೆ. ಕರ್ನಾಟಕವನ್ನು ನೋಡಿ ಇಂದು ಗುಜರಾತ್‌, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯಗಳೂ ಗ್ಯಾರಂಟಿ ಮಾದರಿಯನ್ನು ಅನುಸರಿಸುತ್ತಿವೆ ಎಂದು ಸಿಎಂ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ 5,300 ಕೋಟಿ ರೂ. ಅನುದಾನ ಬಿಡುಗಡೆ ಮಾಡದೆ ರಾಜ್ಯಕ್ಕೆ ದ್ರೋಹ ಎಸಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನ ನೀಡಲಾಗಿದ್ದು, ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಹಾಗೂ ರೈತರು ಭೂಮಿ ಬಿಟ್ಟುಕೊಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2023-24ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ, 5,300 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನಂತರದ ನಾಲ್ಕು ಬಜೆಟ್‌ಗಳು ಕಳೆದರೂ ಒಂದು ಪೈಸೆ ಹಣವನ್ನೂ ಬಿಡುಗಡೆ ಮಾಡಿಲ್ಲ. ಇದು ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕಕ್ಕೆ ಬರಬೇಕಿದ್ದ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಅಷ್ಟೇ ಅಲ್ಲದೆ, ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ರೂ. ಹಾಗೂ ಬೆಂಗಳೂರಿನ ಪೆರಿಫೆರಲ್‌ ರಿಂಗ್‌ ರೋಡ್‌ ಅಭಿವೃದ್ಧಿಗೆ ಘೋಷಿಸಿದ್ದ 3,000 ಕೋಟಿ ರೂ. ಸೇರಿದಂತೆ ಒಟ್ಟು 11,495 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ. ಇದು ಕನ್ನಡಿಗರಿಗೆ ಮತ್ತು ನರಸಿಂಹರಾಜಪುರದ ಜನತೆಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 41 ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಈ ಪೈಕಿ 31 ಸೇತುವೆಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಉಳಿದವನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 6.10 ಕೋಟಿ ರೂ. ಹಾಗೂ ಜಿಲ್ಲಾ ಮುಖ್ಯರಸ್ತೆಗಳ ಸುಧಾರಣೆಗಾಗಿ 16 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದರ ಜೊತೆಗೆ ರಾಜ್ಯ ಹೆದ್ದಾರಿಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ 7.5 ಕೋಟಿ ರೂ. ಹಾಗೂ ಜಿಲ್ಲಾ ಮುಖ್ಯರಸ್ತೆಗಳಲ್ಲಿ ಮೂರು ಸೇತುವೆಗಳಿಗಾಗಿ 10.40 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಅಲ್ಲದೆ ಕ್ಷೇತ್ರದ ವಿವಿಧ ಭಾಗಗಳಲ್ಲಿ 2.80 ಕೋಟಿ ರೂ. ವೆಚ್ಚದಲ್ಲಿ ಕಿರು ಸೇತುವೆಗಳ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕರ ಮನವಿಗೆ ಸ್ಪಂದಿಸಿದ ಅವರು, ನೂತನ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 2,000 ಕೋಟಿ ರೂ.ಗಳ ಅನುದಾನದಲ್ಲಿ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿಯಾಗಿ 50 ಕೋಟಿ ರೂ.ಗಳನ್ನು ಒದಗಿಸುವುದಾಗಿ ಘೋಷಿಸಿದರು. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ನಮ ಸರ್ಕಾರ ಜೀವ ತುಂಬುತ್ತಿದೆ ಎಂದು ಹೇಳಿದರು.

ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಸಿದ್ದರಾಮಯ್ಯ ಅವರು ಹಣಕಾಸಿನ ಶಿಸ್ತಿನೊಂದಿಗೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಮೀಸಲಿರಿಸಿ ಈ ಯೋಜನೆಗಳನ್ನು ಯಶಸ್ವಿಗೊಳಿಸಿದ್ದಾರೆ. ಇಂಧನ ಇಲಾಖೆಯೊಂದರಲ್ಲೇ ಸುಮಾರು 2.64 ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ ಸುಮಾರು 10,000 ಕೋಟಿ ರೂ.ಗಳ ಸಬ್ಸಿಡಿಯನ್ನು ಸರ್ಕಾರ ಭರಿಸುತ್ತಿದೆ. ಗೃಹಲಕ್ಷಿ, ಶಕ್ತಿ ಸೇರಿದಂತೆ ಎಲ್ಲಾ ಯೋಜನೆಗಳಿಂದ ಇಂದು ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 5,000 ರೂ.ಗಳಷ್ಟು ಆರ್ಥಿಕ ನೆರವು ಸಿಗುತ್ತಿದೆ ಎಂದರು.

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಕನಸಿನಂತೆ ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರನ್ನು ಮೇಲೆತ್ತಲು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದರು.
ಈ ವೇಳೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಗಡಿ ಶಾಸಕ ಹೆಚ್‌.ಸಿ.ಬಾಲಕೃಷ್ಣ, ತರೀಕೆರೆ ಶಾಸಕರಾದ ಜಿ.ಹೆಚ್‌.ಶ್ರೀನಿವಾಸ್‌‍, ಕಡೂರು ಶಾಸಕರಾದ ಕೆ.ಎಸ್‌‍.ಆನಂದ್‌, ವಿಧಾನ ಪರಿಷತ್‌ ಸದಸ್ಯರಾದ ಡಾ.ಆರತಿ ಕೃಷ್ಣ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ಶ್ರೀನಿವಾಸ್‌‍, ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್‌.ಹರೀಶ್‌, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌, ಜಿಲ್ಲಾ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮುಂತಾದವರಿದ್ದರು.

RELATED ARTICLES

Latest News