ಬೆಂಗಳೂರು, ಮೇ 13- ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ/ಅಧಿಕಾರಿಗಳ ವೇತನವನ್ನು ಶೇ.12.5ರಷ್ಟು ಪರಿಷ್ಕರಣೆ ಮಾಡಲಾಗಿದೆ. ಸಾರಿಗೆ ಸಂಸ್ಥೆಗಳ ನೌಕರರಿಗೆ 2025ರ ಏಪ್ರಿಲ್ ಒಂದರಿಂದಲೇ ಪೂರ್ವಾನ್ವಯವಾಗುವಂತೆ ಶೇ.12.5 ರಷ್ಟು ವೇತನ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ವೇತನ ಪರಿಷ್ಕರಣೆಯಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು 72.80 ಕೋಟಿ ರೂ. ಹೊರೆಯಾಗಲಿದೆ. ಪ್ರತಿ ವರ್ಷ 873.64 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ನಾಲ್ಕು ಸಾರಿಗೆ ಸಂಸ್ಥೆಗಳ 1 ಲಕ್ಷದ 5 ಸಾವಿರ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಅನ್ವಯವಾಗಲಿದೆ ಎಂದು ಕೆಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
2023 ರ ಮಾರ್ಚ್‌ನ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳಲ್ಲಿ ಮೊದಲ ಕಂತಿನ ಹಣ 450 ಕೋಟಿ ರೂವನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಈಗಾಗಲೇ ಜಮಾ ಮಾಡಲಾಗಿದೆ ಎಂದು ಹೇಳಿದೆ.
2025ರ ಏಪ್ರಿಲ್ ಒಂದ 2026ರ ಜೂನ್ 30ರ ವರೆಗಿನ ವೇತನ ಪರಿಷ್ಕರಣೆ ಹೆಚ್ಚಳದ ಹಿಂಬಾಕಿ ಮೊತ್ತವನ್ನು ಮುಂದಿನ ದಿನಗಳಲ್ಲಿ ಪಾವತಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
