Saturday, May 4, 2024
Homeಬೆಂಗಳೂರುಬೆಂಗಳೂರು : ಸ್ಟಾರ್ ಹೋಟೆಲ್ ಕೊಠಡಿಯಲ್ಲಿ ವಿದೇಶಿ ಮಹಿಳೆಯ ಕೊಲೆ

ಬೆಂಗಳೂರು : ಸ್ಟಾರ್ ಹೋಟೆಲ್ ಕೊಠಡಿಯಲ್ಲಿ ವಿದೇಶಿ ಮಹಿಳೆಯ ಕೊಲೆ

ಬೆಂಗಳೂರು, ಮಾ.14- ಖಾಸಗಿ ಸ್ಟಾರ್ ಹೋಟೆಲ್ವೊಂದರಲ್ಲಿ ತಂಗಿದ್ದ ವಿದೇಶಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಉಜ್ಬೇಕಿಸ್ತಾನ ಮೂಲದ ಜರೀನಾ(27) ಕೊಲೆಯಾಗಿರುವ ವಿದೇಶಿ ಮಹಿಳೆ. ಈ ಮಹಿಳೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪ್ರವಾಸಿ ವೀಸಾದಲ್ಲಿ ಜರೀನಾ ಅವರು ಭಾರತಕ್ಕೆ ಆಗಮಿಸಿದ್ದು, ಏಳೆಂಟು ದಿನಗಳ ಹಿಂದೆ ನಗರಕ್ಕೆ ಬಂದು ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಿಡಿಎ ಸೇತುವೆ ಸಮೀಪದ ಖಾಸಗಿ ಸ್ಟಾರ್ ಹೋಟೆಲ್ನ ಎರಡನೇ ಮಹಡಿಯ ಕೊಠಡಿಯಲ್ಲಿ ಉಳಿದುಕೊಂಡಿದ್ದರು.ನಿನ್ನೆ ಕೊಠಡಿಯಿಂದ ಜರೀನಾ ಅವರು ಹೋಟೆಲ್ ಬಾಯ್ಯಿಂದ ಊಟ, ತಿಂಡಿ ತರಿಸಿಕೊಂಡಿಲ್ಲ.

ಸಂಜೆ ಹೋಟೆಲ್ ಬಾಯ್ ಜರೀನಾ ಅವರ ರೂಂ ಬಳಿ ಹೋಗಿ ಬೆಲ್ ಮಾಡಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಬಾಗಿಲು ತೆರೆದಿಲ್ಲ.ಹೊರಗೆ ಹೋಗಿರಬಹುದೆಂದು ತಿಳಿದು ಸುಮ್ಮನಾಗಿದ್ದಾರೆ.ರಾತ್ರಿ 8.30ರ ಸುಮಾರಿಗೆ ಮತ್ತೆ ಹೋಗಿ ಬೆಲ್ ಮಾಡಿ, ಬಾಗಿಲು ತಟ್ಟಿದಾಗ ತೆಗೆದಿಲ್ಲ. ಇದರಿಂದ ಅನುಮಾನ ಗೊಂಡು ಹೋಟೆಲ್ ಮ್ಯಾನೇಜರ್ಗೆ ತಿಳಿಸಿದ್ದಾರೆ.

ಮ್ಯಾನೇಜರ್ ಮಾಸ್ಟರ್ ಕೀಯಿಂದ ವಿದೇಶಿ ಮಹಿಳೆ ತಂಗಿದ್ದ ರೂಂ ಬಾಗಿಲು ತೆಗೆದು ನೋಡಿದಾಗ ಹಾಸಿಗೆ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಅವರ ಶವ ಕಂಡುಬಂದಿದೆ. ತಕ್ಷಣ ಮ್ಯಾನೇಜರ್ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಎಫ್ಎಸ್ಎಲ್ ತಂಡ, ಬೆರಳಚ್ಚು ತಜ್ಞರ ತಂಡ, ಶ್ವಾನ ದಳ ಆಗಮಿಸಿ ರೂಂ ಪರಿಶೀಲಿಸಿವೆ.

ಜರೀನಾ ಅವರ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಈ ಮಹಿಳೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೋರಿಂಗ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇವರನ್ನು ಯಾರಾದರೂ ಭೇಟಿ ಮಾಡಲು ರೂಂಗೆ ಬಂದಿದ್ದರೆ ಎಂಬ ಬಗ್ಗೆ ಪೊಲೀಸರು ಹೋಟೆಲ್ನಲ್ಲಿರುವ ಸಿಸಿ ಕ್ಯಾಮೆರಾಗಳು ಹಾಗೂ ಲೆಡ್ಜರ್ ಪುಸ್ತಕವನ್ನು ಪರಿಶೀಲಿಸಿದ್ದಾರೆ.ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಈ ವಿದೇಶಿ ಮಹಿಳೆ ಸಾವು ಹೇಗಾಗಿದೆ ಎಂಬುವುದು ನಿಖರವಾಗಿ ಗೊತ್ತಾಗಲಿದೆ.

RELATED ARTICLES

Latest News