ಬೆಂಗಳೂರು,ಫೆ.19- ಮನೆ ಯೊಂದರಲ್ಲಿ ಬೆಂಕಿ ಹೊತ್ತಿಕೊಂಡು ವೃದ್ಧರೊಬ್ಬರು ಸಜೀವ ದಹನವಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.ಮೈಲಸಂದ್ರದ ತಿಮರಾಯಪ್ಪ ಸರ್ಕಲ್ ಸಮೀಪದ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮೈಲಾರಪ್ಪ (80) ಮೃತಪಟ್ಟ ವೃದ್ಧ.
ಮೈಲಾರಪ್ಪ ಅವರಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಎಡಗಾಲು ಕತ್ತರಿಸಿದ್ದು, ಓಡಾಡಲು ಆಗುವುದಿಲ್ಲ. ಈ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ರಾತ್ರಿ ವೇಳೆ ಇವರ ಮೊಮ್ಮಗ ಜೊತೆಯಲ್ಲಿರುತ್ತಿದ್ದರು.
ಇವರ ಮನೆ ಸಮೀಪ ಮೊಮಗಳು ರಮ್ಯಾ ವಾಸವಾಗಿದ್ದಾರೆ. ತಾತನ ಯೋಗಕ್ಷೇಮವನ್ನು ಅವರೇ ವಿಚಾರಿಸಿ ಊಟ ಉಪಚಾರ ನೋಡಿಕೊಳ್ಳುತ್ತಿದ್ದರು.ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ರಮ್ಯಾ ಅವರು ಊಟ ಕೊಡಲು ಹೋಗಿದ್ದಾಗ ನನಗೆ ಆರೋಗ್ಯ ಸರಿ ಇಲ್ಲ. ಮಾತ್ರೆ ಕೊಡಲು ಹೇಳಿದ್ದಾರೆ.ಅದರಂತೆ ರಮ್ಯಾ ಅವರು ಮಾತ್ರೆ ತಂದುಕೊಟ್ಟು ಮನೆಗೆ ಹೋಗಿದ್ದಾರೆ.
ಪತ್ರನಿತ್ಯ ಮೊಮಗ ಕುಮಾರ್ ಅಲಿಯಾಸ್ ರಾಮಕೃಷ್ಣ ತಾತನ ಜೊತೆಯಲ್ಲಿರುತ್ತಿದ್ದರು. ನಿನ್ನೆ ಕಾರ್ಯನಿಮಿತ್ತ ತಾತನ ಜೊತೆ ಇರಲು ಸಾಧ್ಯವಾಗದೇ ಹೊರಗೆ ಹೋಗಿದ್ದಾರೆ. ಇಂದು ಬೆಳಗಿನ ಜಾವ 2.20 ರ ಸುಮಾರಿನಲ್ಲಿ ಮೈಲಾರಪ್ಪ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಈ ವಿಷಯ ವನ್ನು ದೂರದ ಸಂಬಂಧಿ ಭಾಗ್ಯಮ ಎಂಬುವವರು ರಮ್ಯಾಗೆ ತಿಳಿಸಿದ್ದಾರೆ. ತಕ್ಷಣ ರಮ್ಯಾ ಕುಟುಂಬ ದವರು ಹಾಗೂ ನೆರೆಹೊರೆಯವರು ಬಂದು ಬೆಂಕಿಯನ್ನು ನಂದಿಸಿದ್ದಾರೆ.
ಮನೆಯ ಮೇಲ್ಛಾವಣಿ ಸೀಟನ್ನು ರಮ್ಯಾ ಅವರ ಪತಿ ಕುಮಾರ್ ಅವರು ಒಡೆದು ಒಳಗೆ ಹೋಗಿ ನೋಡಿದಾಗ ತಾತ ಮೈಲಾರಪ್ಪ ಅವರು ಸಜೀವ ದಹನವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆರ್‌ಆರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಳಗೆ ಬೆಂಕಿ ಹೊತ್ತಿ ಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ.ಈ ಬಗ್ಗೆ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
