ಬೆಂಗಳೂರು,ಜೂ.29- ಪ್ರೀತಿ ಮಾಡಿ ಮದುವೆಗೆ ಒಲ್ಲೆ ಎಂದ ಪ್ರೇಯಸಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಪ್ರಿಯಕರ ಕೊಲೆ ಮಾಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಕೆಪಿ ಅಗ್ರಹಾರದ ನಿವಾಸಿ ಅಂಜಲಿ (23) ಕೊಲೆಯಾದ ನತದೃಷ್ಟೆ.
ಲಗ್ಗೆರೆ ನಿವಾಸಿ ಕಾರ್ ಸೀಸರ್ ಕೆಲಸ ಮಾಡಿಕೊಂಡಿರುವ ಆರೋಪಿ ರಾಜೀವ್ ಈ ಹಿಂದೆ ಕೆಪಿ ಅಗ್ರಹಾರದಲ್ಲಿ ವಾಸವಾಗಿದ್ದನು. ಆ ವೇಳೆ ಮನೆ ಸಮೀಪವೇ ಇದ್ದ ಅಂಜಲಿ ಅವರ ಪರಿಚಯವಾಗಿದ್ದು, ಅವರ ಕುಟುಂಬಕ್ಕೆ ಅಗತ್ಯವಿದ್ದಾಗಲೆಲ್ಲಾ ಹೋಗಿ ಸಹಾಯ ಮಾಡುತ್ತಿದ್ದನು.ಆ ಸಂದರ್ಭದಲ್ಲಿ ಅಂಜಲಿ ಹಾಗೂ ರಾಜೀವ್ ನಡುವೆ ಪ್ರೀತಿಯಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.
ಇತ್ತೀಚೆಗೆ ರಾಜೀವ್ ಕುಟುಂಬ ಮನೆ ಬದಲಾಯಿಸಿಕೊಂಡು ಲಗ್ಗೆರೆಗೆ ಹೋಗಿದೆ. ತನ್ನ ಪ್ರೀತಿ ವಿಚಾರವನ್ನು ಅಂಜಲಿ ಮನೆಯವರಿಗೆ ರಾಜೀವ್ ಹೇಳಿಕೊಂಡಿದ್ದಾನೆ. ಆದರೆ ಮನೆಯವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.ಈ ನಡುವೆ ಅಂಜಲಿಯೂ ಸಹ ಆತನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಅಲ್ಲದೇ ಮದುವೆಯಾಗಲು ನಿರಾಕರಿಸಿದ್ದರಿಂದ ರಾಜೀವ್ ಬೇಸರಗೊಂಡಿದ್ದನು.
ನಿನ್ನೆ ರಾತ್ರಿ ಅಂಜಲಿಯನ್ನು ಎಗ್‌ರೈಸ್ ತಿನ್ನಲು ಕರೆದಿದ್ದಾನೆ. ಆಕೆ ಕೆಪಿ ಅಗ್ರಹಾರದಿಂದ ಕುರುಬರಹಳ್ಳಿಯ ಆದಿತ್ಯ ಜಂಕ್ಷನ್ ಬಳಿಯ ಚೈತನ್ಯ ಟೆಕ್ ಶಾಲೆ ಸಮೀಪ ರಾತ್ರಿ 8 ಗಂಟೆ ಸುಮಾರಿನಲ್ಲಿ ಬಂದಾಗ ಇಬ್ಬರು ಎಗ್‌ರೈಸ್ ಸೇವಿಸಿದ್ದಾರೆ.
ನಂತರ ಅಂಜಲಿಯೊಂದಿಗೆ ಮಾತನಾಡುತ್ತಾ ಜಿಬಿಎ ಕಸದ ವಿಲೇವಾರಿ ಘಟಕದ ಹಿಂಭಾಗಕ್ಕೆ ಹೋಗಿ ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆದರೆ ಆಕೆ ಮದುವೆಗೆ ನಿರಾಕರಿಸಿದಾಗ ಇಬ್ಬರ ನಡುವೆ ಜಗಳವಾಗಿದೆ.
ನಿನ್ನ ಜೊತೆ ಮಾತನಾಡಲು ಇಷ್ಟವಿಲ್ಲವೆಂದು ಹೇಳಿ ಅಂಜಲಿ ಹೋಗುತ್ತಿದ್ದಾಗ ಮೊದಲೇ ಮಾಡಿಕೊಂಡ ಸಂಚಿನಂತೆ ಹಿಂಬಾಲಿಸಿಕೊಂಡು ಹೋಗಿ ತಾನು ತಂದಿದ್ದ ಚಾಕುವಿನಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯವತಿಯನ್ನು ಸ್ಥಳೀಯರು ಗಮನಿಸಿ ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರಾದರೂ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಂಜಲಿ ಅವರ ಅಜ್ಜಿ ಚನ್ನಮ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ರಾಜೀವ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
