Tuesday, April 14, 2026
Homeಬೆಂಗಳೂರುಮಾ.30ಕ್ಕೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಬಜೆಟ್‌ ಮಂಡನೆ ಸಾಧ್ಯತೆ

ಮಾ.30ಕ್ಕೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಬಜೆಟ್‌ ಮಂಡನೆ ಸಾಧ್ಯತೆ

Budget presentation of urban corporations under GBA likely on March 30

ಬೆಂಗಳೂರು, ಮಾ.18- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರಪಾಲಿಕೆಗಳ ಚೊಚ್ಚಲ ಬಜೆಟ್‌ ಮಾ.30ಕ್ಕೆ ಮಂಡನೆಯಾಗುವ ಸಾಧ್ಯತೆಗಳಿವೆ.ಜಿಬಿಎ ರಚನೆಯಾದ ಬಳಿಕ ಮೊದಲ ಬಾರಿಗೆ ಅದರ ವ್ಯಾಪ್ತಿಯ ಐದು ನಗರಪಾಲಿಕೆಗಳು 2026-27ನೇ ಸಾಲಿನ ಬಜೆಟ್‌ ಮಂಡನೆಗೆ ಸಜ್ಜಾಗಿದ್ದು ಇದೇೕ ತಿಂಗಳ 30ರಂದು ಐದು ಪಾಲಿಕೆಗಳ ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವಿಸರ್ಜನೆಯಾದ ಬಳಿಕ, ಈಗಾಗಲೇ ಆರನೇ ಬಾರಿಗೆ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳಿಂದಲೇ ಬಜೆಟ್‌ ಮಂಡನೆಯಾಗುತ್ತಿರುವುದು ವಿಶೇಷವಾಗಿದೆ.ಈ ಬಾರಿ ಪ್ರತಿಯೊಂದು ನಗರಪಾಲಿಕೆಗಳು ತಮ್ಮ ವ್ಯಾಪ್ತಿಯ ಆದಾಯ-ವೆಚ್ಚ ಲೆಕ್ಕಚಾರ ಮಾಡಿ, ಸರ್ಕಾರದ ಅನುದಾನದ ಆಧಾರದ ಮೇಲೆ ಆಯವ್ಯಯ ರೂಪಿಸುತ್ತಿವೆ.

ಹಿಂದಿನ ಬಾರಿ ಸುಮಾರು 19 ಸಾವಿರ ಕೋಟಿ ರೂ.ಗಳ ಬಜೆಟ್‌ ಮಂಡಿಸಲಾಗಿತ್ತು. ಆದರೆ ಈ ಬಾರಿ ಬಿಬಿಎಂಪಿಯನ್ನು ಐದು ನಗರಪಾಲಿಕೆಗಳಾಗಿ ವಿಭಜನೆ ಮಾಡಿರುವ ಹಿನ್ನೆಲೆಯಲ್ಲಿ ಬಜೆಟ್‌ 2,300 ಕೋಟಿಯಿಂದ 3,600 ಕೋಟಿಯೊಳಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಪಾಲಿಕೆವಾರು ಅಂದಾಜು: ಉತ್ತರ ನಗರಪಾಲಿಕೆ: 2800- 2900 ಕೋಟಿ ರೂ, ದಕ್ಷಿಣ ನಗರಪಾಲಿಕೆ: 2700-2800 ಕೋಟಿ, ಪೂರ್ವ ನಗರಪಾಲಿಕೆ: 3500- 3600 ಕೋಟಿ, ಕೇಂದ್ರ ನಗರಪಾಲಿಕೆ: 2750-2850 ಕೋಟಿ ಹಾಗೂ ಪಶ್ಚಿಮ ನಗರಪಾಲಿಕೆ: 2300- 2400 ಕೋಟಿ ರೂ. ಅಂದಾಜು ವೆಚ್ಚಗಳಲ್ಲಿ ಬಜೆಟ್‌ ಮಂಡನೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.

5 ನಗರಪಾಲಿಕೆಗಳಿಗೆ ಆದಾಯ ಮೂಲಗಳು: ಅಸ್ತಿ ತೆರಿಗೆ, ಹೊಸ ಜಾಹೀರಾತು ತೆರಿಗೆ, .ಮುನ್ಸಿಫಲ್‌ ಬಾಂಡ್‌ಗಳು, ಹೊಸ ಪಾರ್ಕಿಂಗ್‌ ನೀತಿ, ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ, ಪ್ರೀಮಿಯಂ ಎಫ್‌ ಎ ಅರ್‌ ಜಾರಿ ಮೂಲಕ ಆದಾಯ ಸಂಗ್ರಹಿಸಲು ಪಾಲಿಕೆಗಳು ಮುಂದಾಗಿದ್ದು ಈ ಬಾರಿ ಯಾವುದೇ ಹೊಸ ಯೋಜನೆಗಳನ್ನು ಜಾರಿ ಮಾಡುವುದು ಅನುಮಾನವಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ದೊಡ್ಡ ಹೊಸ ಯೋಜನೆಗಳಿಗಿಂತ ಹಳೆಯ ಯೋಜನೆಗಳ ಪೂರ್ಣಗೊಳಿಸುವಿಕೆ ಹೆಚ್ಚಿನ ಒತ್ತು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆ ಇದೆ.

ನಿರೀಕ್ಷಿತ ಯೋಜನೆಗಳು: ಡಿಜಿಟಲ್‌ ಇ-ಖಾತಾ ವ್ಯವಸ್ಥೆ ಜಾರಿ, ಹೊಸ ಪಾರ್ಕಿಂಗ್‌ ವ್ಯವಸ್ಥೆ, ವೈಟ್‌ಟಾಪಿಂಗ್‌‍ ರಸ್ತೆಗಳು, ಸುರಂಗ ರಸ್ತೆ ಯೋಜನೆಗೆ ಅನುದಾನ ಘೋಷಣೆಯಾಗಲಿದೆ. ಮೇಲ್ಸೇತುವೆ, ಅಂಡರ್‌ಪಾಸ್‌‍ ನಿರ್ಮಾಣ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಉಚಿತ ಎಲೆಕ್ಟ್ರಿಕ್‌ ಆಟೋ (ಮಹಿಳೆ, ಅಲ್ಪಸಂಖ್ಯಾತರಿಗೆ)ಗೃಹಭಾಗ್ಯ ಯೋಜನೆ ವಿಸ್ತರಣೆ, ಒಂಟಿಮನೆ ಸಹಾಯಧನ 5 ಲಕ್ಷದಿಂದ 6 ಲಕ್ಷಕ್ಕೆ ಏರಿಕೆ ಮಾಡುವ ಲಕ್ಷಣಗಳು ಕಂಡು ಬಂದಿದೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಹೆಚ್ಚುವರಿ ಅನುದಾನ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಮಗಳು, ನಗರಪಾಲಿಕೆ ಆಸ್ಪತ್ರೆಗಳಲ್ಲಿ ಡಯಗ್ನಾಸ್ಟಿಕ್‌ ಲ್ಯಾಬ್‌ಗಳ ಸ್ಥಾಪನೆ, ಪ್ರತಿ ಕ್ಷೇತ್ರಕ್ಕೆ ಆಂಬುಲೆನ್ಸ್ ಡೆಂಟಲ್‌ ಕ್ಲಿನಿಕ್‌, ಫಿಜಿಯೋಥೆರಪಿ ಸೇವೆಗಳು, ಸೇವ್‌ ಮಾಮ್‌‍ ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇವಿ ಬೈಕ್‌ಗಳು ವಿತರಣೆ ಮಾಡುವ ಸಾಧ್ಯತೆಗಳಿವೆ. ಕೆರೆಗಳ ಅಭಿವೃದ್ಧಿ, ಪುಟ್‌ಪಾತ್‌ ಅಭಿವೃದ್ಧಿ, ನಮ್ಮ ಕ್ಲಿನಿಕ್‌ಗಳಿಗೆ ಹೈಟೆಕ್‌ ಸ್ಪರ್ಶ, ಗುಂಡಿ ಮುಕ್ತ ರಸ್ತೆ, ಕಸದ ಸಮಸ್ಯೆಗೆ ಪರಿಹಾರ ಈ ಬಾರಿಯ ಬಜೆಟ್‌ ಹೈಲೈಟ್ಸ್ ಆಗಿರಲಿವೆ.

ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾರ್ಗದರ್ಶನದಲ್ಲಿ ದಾರಿ ಯಾವುದಾದರೇನು..? ಗುರಿ ತಲುಪುವುದು ಮುಖ್ಯ ಅನ್ನುವ ಕವಿ ವಾಣಿಯೊಂದಿಗೆ ಬಜೆಟ್‌ ಮಂಡನೆ ಮಾಡುವ ಮೂಲಕ ನಮ್ಮ ಹೆಮ್ಮೆಯ ಬೆಂಗಳೂರು ಕೆಂಪೇಗೌಡರ ಕನಸಿನ ಕೂಸು.ಅದನ್ನು ಉನ್ನತ ಮಟ್ಟಕ್ಕೇರಿಸುವ ಸಂಕಲ್ಪದೊಂದಿಗೆ ಈ ಬಾರಿಯ ಬಜೆಟ್‌ ಮಂಡನೆ ಮಾಡೋದಕ್ಕೆ ಐದು ನಗರಪಾಲಿಕೆಗಳ ಅಯುಕ್ತರು ಸಿದ್ದತೆ ನಡೆಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ ಮೊದಲ ಬಾರಿಗೆ ಬೆಂಗಳೂರು ಉಸ್ತುವಾರಿ ಸಚಿವರಾದ ನಂತರ ಮಂಡನೆ ಅಗುತ್ತಿರುವ ಮೊದಲ ನಗರಪಾಲಿಕೆ ಬಜೆಟ್‌ಗೆ ಅಭಿವೃದ್ಧಿ ಹೆಸರಿನಲ್ಲಿ ಸಲಹೆ, ಸೂಚನೆ ನೀಡಿದ್ದು ಗ್ರೇಟರ್‌ ಬೆಂಗಳೂರು ದೃಷ್ಟಿಕೋನಕ್ಕೆ ಅನುಗುಣವಾಗಿ ನಗರವನ್ನು ಆಧುನಿಕ ನಗರವನ್ನಾಗಿ ಪರಿವರ್ತಿಸುವ ಸಾಹಸಕ್ಕೆ ಡಿಸಿಎಂ ಮುಂದಾಗಿದ್ದಾರೆ.ಗ್ರೇಟರ್‌ ಬೆಂಗಳೂರು ಪರಿಕಲ್ಪನೆಗೆ ಅನುಗುಣವಾಗಿ ಈ ಬಜೆಟ್‌ ರೂಪುಗೊಳ್ಳುತ್ತಿದ್ದು. ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜನಪರ ಬಜೆಟ್‌ ಮಂಡನೆ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

RELATED ARTICLES

Latest News