ಬೆಂಗಳೂರು,ಜ.19-ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ ವೈಟ್‌ಫೀಲ್ಡ್ ನ ಯುವತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ 1.75 ಕೋಟಿ ರೂ. ಹಣ ಪಡೆದು ವಂಚಿಸಿರುವ ಸಿವಿಲ್ ಎಂಜಿನಿಯರ್‌ರೊಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ನಿವಾಸಿ ವಿಜೇಶ್ ಬಿ. ಅಲಿಯಾಸ್ ವಿಜಯ್‌ರಾಜ್‌ಗೌಡ (32) ಬಂಧಿತ ಆರೋಪಿ. ಈತ ಬಿ.ಇ ಸಿವಿಲ್ ವ್ಯಾಸಂಗ ಮಾಡಿದ್ದು, ಕೆಲವು ತಿಂಗಳುಗಳ ಕಾಲ ಎಂಜಿನಿಯರ್ ವೃತ್ತಿಯನ್ನು ಮಾಡಿದ್ದ.
ವೈಟ್‌ಫೀಲ್‌್ಡನಲ್ಲಿ ವಾಸವಾಗಿರುವ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಅವರನ್ನು ಮ್ಯಾಟ್ರಿಮೊನಿಯಲ್ಲಿ ಪರಿಚಯಿಸಿಕೊಂಡ ಈ ಆರೋಪಿ ತನ್ನ ಪತ್ನಿಯನ್ನು ಸೋದರಿಯೆಂದು, ತಂದೆಯನ್ನು ನಿವೃತ್ತ ತಹಸೀಲ್ದಾರ್ ಎಂದು ಪರಿಚಯಿಸಿ ಹಾಗೂ ತಮಗೆ ಕೋಟ್ಯಂತರ ರೂ. ಬೆಲೆಯ ಆಸ್ತಿ ಇದೆ ಎಂದು ನಂಬಿಸಿ ಇಬ್ಬರೂ ಒಟ್ಟಿಗೆ ಸೇರಿ ಬ್ಯುಸಿನೆಸ್ ಮಾಡೋಣವೆಂದು ಹೇಳಿ ಹಂತ ಹಂತವಾಗಿ 1.75 ಕೋಟಿ ಹಣವನ್ನು ಪಡೆದುಕೊಂಡಿದ್ದಾನೆ.
ನಂತರ ದಿನದಲ್ಲಿ ಹಣ ವಾಪಸ್ ಕೊಡುವಂತೆ ಯುವತಿ ಮತ್ತು ಆಕೆಯ ಸ್ನೇಹಿತರು ಒತ್ತಾಯಿಸಿದಾಗ ಆರೋಪಿ ಆರಂಭದಲ್ಲಿ ಸ್ವಲ್ಪ ಹಣವನ್ನು ನೀಡಿದ್ದಾನೆ. ತದ ನಂತರದಲ್ಲಿ ಉಳಿದ ಹಣ ಕೊಡಲು ಹಿಂದೇಟು ಹಾಕಿದ್ದಾನೆ.
ಉಳಿದ ಹಣವನ್ನು ಕೊಡುವಂತೆ ಒತ್ತಾಯ ಮಾಡಿದಾಗ ಆರೋಪಿ ಯುವತಿಗೆ ಬೆದರಿಕೆ ಹಾಕಿದ್ದಾನೆ. ಆಗ ಆಕೆ ಈತನ ಹಿನ್ನೆಲೆ ವಿಚಾರಿಸಿದಾಗ ಅಸಲಿ ಮುಖ ಬಯಲಾಗಿದೆ. ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವಿರುವುದು ತಿಳಿದು ಬಂದಿದೆ. ನಂತರ ತಾನು ಮೋಸ ಹೋಗಿರುವುದಾಗಿ ಅರಿತ ಯುವತಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದರು.
ಕೃತ್ಯ ನಡೆದ ಸ್ಥಳ ಕೆಂಗೇರಿ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ವೈಟ್‌ಫೀಲ್‌್ಡ ಠಾಣೆ ಪೊಲೀಸರು ಕೆಂಗೇರಿ ಠಾಣೆಗೆ ವರ್ಗಾವಣೆ ಮಾಡಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಉಳಿದ ಇಬ್ಬರು ಆರೋಪಿಗಳ ಪಾತ್ರವೇನು ಎಂಬುವುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
