ಬೆಂಗಳೂರು,ಮೇ 30-ನಗರದ ಶಾಲೆಯೊಂದರಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವಹಳ್ಳಿಯ ಚಿತ್ರಕೂಟ ಕೌಶಲ್ಯ ಶಾಲೆಯ 4ನೇ ಮಹಡಿಯಲ್ಲಿರುವ ಆಡಿಟೋರಿಯಂನಲ್ಲಿ ಬೆಳಗ್ಗೆ 9.30 ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ಶಾಲೆಯ 9 ಮತ್ತು 10ನೇ ತರಗತಿಯ 55 ಮಂದಿ ವಿದ್ಯಾರ್ಥಿಗಳಿಗೆ ಶಾಲೆಯ ನೆಲಮಹಡಿಯ ತರಗತಿಗಳಲ್ಲಿ ಪಾಠ ನಡೆಯುತ್ತಿತ್ತು. ಶಾಲೆಗೆ ಬೆಂಕಿ ಹೊತ್ತಿಕೊಂಡಿರುವುದು ತಿಳಿಯುತ್ತಿದ್ದಂತೆ ಶಿಕ್ಷಕರು ತಕ್ಷಣ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕರೆದುಕೊಂಡು ಬಂದು ರಕ್ಷಿಸಿದ್ದಾರೆ.
ನಂತರ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಮೂರು ಅಗ್ನಿ ಶಾಮಕ ವಾಹನದೊಂದಿಗೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದು ಪೋಷಕರು ಆತಂಕದಿಂದ ಶಾಲೆ ಬಳಿ ದೌಡಾಯಿಸಿದ್ದರು. ತಮ ಮಕ್ಕಳು ಸುರಕ್ಷಿತರಾಗಿರುವುದು ಕಂಡು ನಿಟ್ಟುಸಿರು ಬಿಟ್ಟರು.
ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಶಾರ್ಟ್ಸಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
