ಬೆಂಗಳೂರು, ಮೇ 30: ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಅಧಿಕೃತವಾಗಿ ಪ್ರಸ್ತಾಪಿಸಿದರು.
ಡಿ.ಕೆ. ಶಿವಕುಮಾರ್ ಅವರು ಬುಧವಾರ ನೂತನ ಮುಖ್ಯಮಂತ್ರಿಯಾಗಿ ಒಂಬತ್ತು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಭೆಯಲ್ಲಿ ಎಐಸಿಸಿ ವೀಕ್ಷಕರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತರಿದ್ದರು.
ಸರಳ ಪ್ರಮಾಣ ವಚನಕ್ಕೆ ಸಿದ್ಧತೆ
ಆರಂಭದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಪ್ರಮಾಣದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಬುಧವಾರ ಕಾರ್ಯದಿನವಾಗಿರುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ, ಸರಳವಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ವಿಧಾನಸೌಧದ ಮೆಟ್ಟಿಲುಗಳ ಬಳಿ ಅಥವಾ ಲೋಕಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಸುಮಾರು 1,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
