ಬೆಂಗಳೂರು,ಜು.28-ರಸ್ತೆ ಬದಿಯಲ್ಲಿ ನಿಂತು ಕ್ಯಾಬ್‌ಗೆ ಕಾಯುತ್ತಿದ್ದ 26 ವರ್ಷದ ಯುವತಿಯೊಬ್ಬರಿಗೆ ನಿನ್ನ ರೇಟ್ ಎಷ್ಟು? ಎಂದು ಲೈಂಗಿಕವಾಗಿ ನಿಂದಿಸಿ ಪರಾರಿಯಾಗಿದ್ದ ಹಣ್ಣಿನ ವ್ಯಾಪಾರಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಮಮೂರ್ತಿನಗರದ ಎನ್‌ಆರ್‌ಐ ಲೇಔಟ್ ನಿವಾಸಿ ಹಣ್ಣಿನ ವ್ಯಾಪಾರಿ ವಿಜಯರಾಘವ್ (42) ಬಂಧಿತ ಕಾಮುಕ. ಈತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮೊನ್ನೆ ರಾತ್ರಿ ರಾಮಮೂರ್ತಿನಗರದ ರಾಘವೇಂದ್ರ ಸರ್ಕಲ್ ಬಳಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಯುವತಿಯೊಬ್ಬರು ಕ್ಯಾಬ್ ಬುಕ್ ಮಾಡಿ ಕಾಯುತ್ತಿದ್ದರು. ಆಗ ಸ್ಕೂಟರ್‌ನಲ್ಲಿ ಬಂದ ಈತ ಯುವತಿಯನ್ನು ಕಂಡು ಅಸಭ್ಯವಾಗಿ ಮಾತನಾಡಿ ಲೈಂಗಿಕವಾಗಿ ನಿಂದಿಸುತ್ತಾ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾನೆ.
ಆಗ ಧೈರ್ಯ ತೆಗೆದುಕೊಂಡ ಯುವತಿ ತಕ್ಷಣವೇ ತನ್ನ ಮೊಬೈಲ್‌ನಲ್ಲಿ ಕಾಮುಕನ ಕೃತ್ಯವನ್ನು ಸೆರೆ ಹಿಡಿದರು. ತನ್ನ ಮುಖ ಹಾಗೂ ವಾಹನದ ನೋಂದಣಿ ಸಂಖ್ಯೆಯನ್ನು ಯುವತಿ ರೆಕಾರ್ಡ್ ಮಾಡುತ್ತಿರುವುದನ್ನು ತಿಳಿದು ಅಲ್ಲಿಂದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದನು.
ಇತ್ತ ಯುವತಿ ತಾನು ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯನ್ನು ಕುರಿತು ಗಂಭೀರ ಪ್ರಶ್ನೆಗಳನ್ನು ಕೇಳಿ ಕಳವಳ ವ್ಯಕ್ತಪಡಿಸಿದರು.
ಈ ವಿಡಿಯೋವನ್ನು ಅವರು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಆರೋಪಿಯನ್ನು ಪತ್ತೆಹಚ್ಚಿ ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಬಗ್ಗೆ ರಾಮಮೂರ್ತಿನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
