ಬೆಂಗಳೂರು,ಏ.11- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಐಎ) ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಅಂತಿಮ ಹಂತದ ಲೋಡ್ ಟೆಸ್ಟ್ ಪರಿಶೀಲನೆಯನ್ನು ಮುಂದೂಡಿದೆ.
ಮೇಲ್ಸೇತುವೆ ಮೇಲೆ ಸದ್ಯಕ್ಕೆ ಎಂದಿನಂತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿರುತ್ತದೆ. ಲೋಡ್ ಟೆಸ್ಟಿಂಗ್ ಪರೀಕ್ಷೆ ನಡೆಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 5 ಗಂಟೆಯಿಂದ ಏ. 17 ರ ಬೆಳಿಗ್ಗೆ 11ರವರೆಗೆ ಮೇಲ್ಸೇತವೆಯ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಬೆಂಗಳೂರು ಸಂಚಾರಿ ಠಾಣೆ ಪೊಲೀಸರು ಪ್ರಕಟಣೆ ಹೊರಡಿಸಿದ್ದರು.
ಆದರೆ ಕಾರಣಾಂತರಗಳಿಂದ ಉದ್ದೇಶಿತ ಅಂತಿಮ ಲೋಡ್ ಟೆಸ್ಟಿಂಗ್ ದಿನಾಂಕವನ್ನು ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧ ಕ್ರಮವನ್ನು ಹಿಂಪಡೆದಿದ್ದು, ಎಂದಿನಂತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ.
