Saturday, April 18, 2026
Homeರಾಜಕೀಯಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಕರ್ನಾಟಕದಲ್ಲಿ ಸಿಎಂ ಬದಲಾವಣೆ..?

ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಕರ್ನಾಟಕದಲ್ಲಿ ಸಿಎಂ ಬದಲಾವಣೆ..?

CM change in Karnataka after five-state election results..?

ಬೆಂಗಳೂರು, ಏ.18- ರಾಜಕೀಯ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುದ್ದೆ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದು, ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ಬಿಟ್ಟುಕೊಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಧಿಕಾರ ಹಂಚಿಕೆಯ ಬಗ್ಗೆ ತೆರೆಮರೆಯಲ್ಲಿ ನಾನಾ ರೀತಿಯ ಕಸರತ್ತುಗಳು ನಡೆಯುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರ ಬೆಂಬಲಿಗರನ್ನೆಲ್ಲಾ ಗುರಿಯಾಗಿಸಿ ನಿರಂತರ ರಾಜಕೀಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿವರೆಗೂ ಸಿದ್ದರಾಮಯ್ಯ ಅವರು ತಮನ್ನು ನಂಬಿದ್ದ ಹಿಂಬಾಲಕರನ್ನು ಕೈ ಬಿಡುವುದಿಲ್ಲ ಎಂಬ ಮೂಲಭೂತ ನಂಬಿಕೆಗೆ ಧಕ್ಕೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ಯಾಪ್ತ ಬಣದಲಿದ್ದ ಕೆ.ಎನ್‌. ರಾಜಣ್ಣ ಅವರೇ ಸಿದ್ದರಾಮಯ್ಯಅವರ ಈ ಬದಲಾವಣೆ ತಮ ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ.

ಪ್ರಸ್ತುತ ಪರಿಸ್ಥಿಯಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುತ್ತಿದ್ದವರು, ಮೌನಕ್ಕೆ ಶರಣಾಗುವಂತಹ ಅಘೋಷಿತ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಯಾವ ಪ್ರತಿಕ್ರಿಯೆಗಳನ್ನು ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಸಿದ್ದರಾಮಯ್ಯಅವರ ಜೊತೆ ಅನ್ಯೋನ್ಯತೆಯಿದೆ ಎಂದು ಬಿಂಬಿಸುತ್ತಲೇ ಡಿ.ಕೆ.ಶಿವಕುಮಾರ್‌ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದೆಡೆ ತಮ ಬೆಂಬಲಿಗರಿಗೆ ದೆಹಲಿ ಪ್ರವಾಸಕ್ಕೆ ಮೌನ ಸಮತಿ ಸೂಚಿಸುವ ಉಪಮುಖ್ಯಮಂತ್ರಿಯವರು, ಹಿರಿಯ ಶಾಸಕರು ದೆಹಲಿಗೆ ಹೋದಾಕ್ಷಣ ಪಕ್ಷದ ಶಿಸ್ತಿನ ಚೌಕಟ್ಟನ್ನು ಉಲ್ಲಂಘನೆ ಮಾಡಿದರೆ ಕ್ರಮ ಅನಿವಾರ್ಯ ಎಂಬ ಎಚ್ಚರಿಕೆ ನೀಡುತ್ತಿದ್ದಾರೆ.
5 ವರ್ಷ ತಮ ತಂದೆಯೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯರೂ ಆಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಮೊನ್ನೆಯಷ್ಟೇ ಹೇಳಿಕೆ ನೀಡಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ವಾತಾವರಣ ಹಾಗಿಲ್ಲ.

ಸಿದ್ದರಾಮಯ್ಯ ಅವರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು ಆಪ್ತ ಬಳಗದಿಂದಲೇ ಆಕ್ಷೇಪಣೆಗಳನ್ನು ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ.ಎನ್‌.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಜೀರ್‌ ಅವರ ಉಚ್ಚಾಟನೆ, ಸಚಿವ ಜಮೀರ್‌ ಅಹಮದ್‌ ಅವರ ವಿರುದ್ಧ ನಡೆಯುತ್ತಿರುವ ತೆರೆಮರೆಯ ಕಸರತ್ತು ಸೇರಿದಂತೆ ಎಲ್ಲಾ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅವರು ಮೌನಕ್ಕೆ ಶರಣಾಗಿದ್ದು, ಅಧಿಕಾರಕ್ಕಾಗಿ ಸಿದ್ದರಾಮಯ್ಯ ಹಿಂಬಾಲಕರಿಗಾಗುತ್ತಿರುವ ಅನ್ಯಾಯವನ್ನು ಕಂಡೂ ಕಾಣದಂತಿದ್ದಾರೆ ಎಂದು ಒಳಗೊಳಗೆ ಅಸಮಾಧಾನಗಳು ಕುದಿಯುತ್ತಿವೆ.

ಡಿ.ಕೆ.ಶಿವಕುಮಾರ್‌ ತಮ ಪರವಾಗಿ ಯಾರೂ ಮಾತನಾಡಬಾರದು ಎಂದು ಹೇಳುತ್ತಲೇ ನಾಯಕತ್ವ ಬದಲಾವಣೆ ಕುರಿತಂತೆ ಮಾತನಾಡುವವರ ಬೆನ್ನಿಗೆ ಪರೋಕ್ಷವಾಗಿ ನಿಲ್ಲುವ ಮೂಲಕ ತಮದೇ ಆದ ಚಾಣಾಕ್ಷ ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ.
2013ರಿಂದ 18ರ ನಡುವೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಮದೇ ಆದ ರಾಜಕೀಯ ತಂತ್ರಗಾರಿಕೆಯಿಂದ ಪೈಪೋಟಿಯಲ್ಲಿದ್ದವರನ್ನು ಸುಲಭವಾಗಿ ನೇಪಥ್ಯಕ್ಕೆ ಸರಿಸಿದರು. ಆದರೆ ಸಿದ್ದರಾಮಯ್ಯಅವರಿಗೆ ಸ್ಪರ್ಧೆ ನೀಡುವಂತೆ ಈಗ ಡಿ.ಕೆ.ಶಿವಕುಮಾರ್‌ ರಾಜಕೀಯ ನಡೆಗಳು ಕಂಡು ಬರುತ್ತಿವೆ.

ಅಧಿಕಾರ ಹಂಚಿಕೆಯ ಚರ್ಚೆಗಳು ಉತ್ತುಂಗದಲ್ಲಿದ್ದಾಗಲೂ ಡಿ.ಕೆ.ಶಿವಕುಮಾರ್‌ ತಾಳೆ ಕಳೆದುಕೊಳ್ಳದೇ ಸಿದ್ದರಾಮಯ್ಯ ಅವರೊಂದಿಗೆ ಎರಡು ಉಪಾಹಾರ ಕೂಟಗಳನ್ನು ನಡೆಸಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಹೇಳಿಸಿದರು.

ಸಿದ್ದರಾಮಯ್ಯ ದೆಹಲಿ ಮಟ್ಟದಲ್ಲಿ ತಮ ಪ್ರಭಾವ ಬೀರಿ ರಾಹುಲ್‌ಗಾಂಧಿ ಮತ್ತು ಡಿ.ಕೆ.ಶಿವಕುಮಾರ್‌ ಪರಸ್ಪರ ಭೇಟಿಯಾಗದಂತೆ ನೋಡಿಕೊಂಡರು. ಆದರೂ ಒಂದೇ ಒಂದು ಅಪಸ್ವರ ತೆಗೆಯದೇ ಡಿ.ಕೆ.ಶಿವಕುಮಾರ್‌ ಪ್ರತಿ ಹಂತದಲ್ಲೂ ಸಹನೆಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಬೇರೆ ಮಾರ್ಗವಿಲ್ಲದಂತಹ ವಾತಾವರಣವನ್ನು ನಿರ್ಮಿಸಿದ್ದಾರೆ.

ಮೂಲಗಳ ಪ್ರಕಾರ ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮಬಂಗಾಳ, ಪುದುಚೇರಿ ವಿಧಾನಸಭೆಗಳ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ರಾಜಕಾರಣ ಕುರಿತು ಗಮನ ಹರಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ.

ಮೇ 20ಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಲಿದ್ದಾರೆ. ದೇವರಾಜ್‌ ಅರಸು ಸೇರಿದಂತೆ ಬಹುತೇಕರ ದಾಖಲೆಗಳನ್ನು ಸಿದ್ದರಾಮಯ್ಯ ಹಿಂದಿಕ್ಕಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬಹುದು ಎಂಬ ಅಂದಾಜುಗಳಿವೆ.
ಡಿ.ಕೆ.ಶಿವಕುಮಾರ್‌ ಅವರು ತಾವು ಮುಖ್ಯಮಂತ್ರಿಯಾಗುವ ಆತವಿಶ್ವಾಸದಲ್ಲಿದ್ದಾರೆ. ಆದರೆ ಸಿದ್ದರಾಮಯ್ಯಅವರ ಬೆಂಬಲಿಗರು ಅಧಿಕಾರ ಹಸ್ತಾಂತರಕ್ಕೆ ಅಷ್ಟು ಸುಲಭವಾಗಿ ಅವಕಾಶ ನೀಡಬಾರದು ಎಂದು ಒಳಗೊಳಗೆ ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯ ಅಧಿಕಾರದಿಂದ ನಿರ್ಗಮಿಸುವ ಮನಸ್ಸು ಮಾಡಿದರೂ, ನಂತರದ ಅವಧಿಗೆ ಮುಖ್ಯಮಂತ್ರಿಯಾಗಲು ಹಲವಾರು ಮಂದಿ ತುದಿಗಾಲ ಮೇಲೆ ನಿಂತಿದ್ದಾರೆ. ಅಂಥವರನ್ನು ಡಿ.ಕೆ.ಶಿವಕುಮಾರ್‌ ವೈಯಕ್ತಿಕವಾಗಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಉನ್ನತ ಮೂಲಗಳ ಪ್ರಕಾರ ಜೂನ್‌ ವೇಳೆಗೆ ಅಧಿಕಾರ ಹಸ್ತಾಂತರವಾಗಲಿದೆ. ಆದರೆ ಸಿದ್ದರಾಮಯ್ಯ ಅವರ ಬಣದಿಂದ ಕೇಳಿಬರುತ್ತಿರುವ ಅಭಿಪ್ರಾಯಗಳೇ ಬೇರೆಯಾಗಿವೆ. 5 ವರ್ಷ ಯಾವುದೇ ಬದಲಾವಣೆ ಇಲ್ಲದೇ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿವೆ.
ಒಟ್ಟಿನಲಿ ರಾಜ್ಯದ ಮತ್ತೊಂದು ರಾಜಕೀಯ ಕ್ರಾಂತಿಗೆ ಜೂನ್‌ ಮುಂಗಾರು ಉತ್ತರ ಹೇಳಬಹುದೆಂಬ ನಿರೀಕ್ಷೆಗಳಿವೆ.

RELATED ARTICLES

Latest News