ಪುಣೆ, ಏ. 18- ಮಹಾರಾಷ್ಟ್ರದ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡರಾತ್ರಿ ತಾಂತ್ರಿಕ ದೋಷದಿಂದ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ರನ್‌ವೇ ಮೇಲೆ ತುರ್ತು ಭೂ ಸ್ಪರ್ಶ ಮಾಡಿದೆ. ಈ ಘಟನೆಯಿಂದ ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ರಾತ್ರಿ ಸುಮಾರು 10:25ರ ಸುಮಾರಿಗೆ ವಾಯುಪಡೆಯ ಯುದ್ಧ ವಿಮಾನವೊಂದು ವಾಡಿಕೆಯ ತರಬೇತಿ ಹಾರಾಟದ ನಂತರ ಭೂಸ್ಪರ್ಶ ಮಾಡುವಾಗ ಈ ಘಟನೆ ಸಂಭವಿಸಿದೆ. ವಿಮಾನದ ಅಡಿಭಾಗದ ಚಕ್ರಗಳ ವ್ಯವಸ್ಥೆಯಲ್ಲಿ ತಾಂತ್ರಿಕ ವೈಫಲ್ಯ ಉಂಟಾದ ಪರಿಣಾಮ ಅದು ರನ್‌ವೇ ಮೇಲೆಯೇ ನಿಂತುಬಿಟ್ಟಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.
ವಿಮಾನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿಯಾಗಿಲ್ಲ. ವಿಮಾನಯಾನವನ್ನು ಪುನಃ ಕಾರ್ಯಾಚರಣೆಗೆ ತರುವ ಕಾರ್ಯ ನಡೆಯುತ್ತಿದೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ ವಿಮಾನ ನಿಲ್ದಾಣದಲ್ಲಿ ಲೋಹಗಾಂವ್ ವಾಯುಪಡೆ ಕೇಂದ್ರದೊಂದಿಗೆ ನಾಗರಿಕ ವಿಮಾನಗಳೂ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮವಾಗಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ರನ್‌ವೇ ಕ್ಲಿಯರ್ ಮಾಡಲು 4 ರಿಂದ 6 ಗಂಟೆಗಳ ಕಾಲ ಹಿಡಿಯಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಈ ಅವಧಿಯಲ್ಲಿ ಅನೇಕ ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದುಪಡಿಸಲಾಯಿತು. ಇಂಡಿಗೋ 31 ಆಗಮನ ಮತ್ತು 34 ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದರೆ, ಏರ್ ಇಂಡಿಯಾ ಮೂರು ಆಗಮನ ಮತ್ತು ಮೂರು ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದೆ.
ಸ್ಪೈಸ್ ಜೆಟ್ ಹಾಗೂ ಆಕಾಶ ಏರ್ ತಲಾ ಎರಡು ಆಗಮನ ಮತ್ತು ಮೂರು ನಿರ್ಗಮನಗಳನ್ನು ರದ್ದುಪಡಿಸಿದವು. ಏರ್ ಇಂಡಿಯಾ ಎಕ್‌್ಸಪ್ರೆಸ್ ಐದು ಆಗಮನ ಮತ್ತು ಐದು ನಿರ್ಗಮನಗಳನ್ನು ರದ್ದುಪಡಿಸಿದೆ.ಪ್ರಯಾಣಿಕರ ಅನುಕೂಲಕ್ಕಾಗಿ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣ ಸಲಹೆ ಹೊರಡಿಸಿದ್ದು, ವಿಮಾನ ಸ್ಥಿತಿ ಪರಿಶೀಲಿಸಿ ಬಳಿಕವೇ ವಿಮಾನ ನಿಲ್ದಾಣಕ್ಕೆ ಬರಲು ಮನವಿ ಮಾಡಿದೆ.
ಪರ್ಯಾಯ ಬುಕ್ಕಿಂಗ್ ಅಥವಾ ಸಂಪೂರ್ಣ ಹಣ ಮರುಪಾವತಿ ಆಯ್ಕೆಯನ್ನೂ ನೀಡಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಯುದ್ಧ ವಿಮಾನವನ್ನು ತೆರವುಗೊಳಿಸಿ, ರನ್‌ವೇ ಪರೀಕ್ಷೆ ನಡೆಸಿದ ನಂತರ ಇಂದು ಬೆಳಗಿನ ಜಾವದ ವೇಳೆಗೆ ಕಾರ್ಯಾಚರಣೆ ಪುನರಾರಂಭಗೊಳಿಸಲಾಯಿತು ಎಂದು ವಾಯುಪಡೆ ಎಕ್‌್ಸ ಮೂಲಕ ತಿಳಿಸಿದೆ.
ವಿಮಾನ ರದ್ದತಿಯಿಂದ ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆಯು ಪ್ಲಾನ್ ಬಿ ಅಡಿಯಲ್ಲಿ ಪೂರ್ಣ ಹಣ ಮರುಪಾವತಿ ಅಥವಾ ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದೆ. ಹವಾಮಾನ ಅಥವಾ ಇಂತಹ ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
