Saturday, April 18, 2026
Homeರಾಜ್ಯದಕ್ಷಿಣ ಭಾರತದಲ್ಲಿ ಸುಪ್ರೀಂ ಪೀಠ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಮನವಿ

ದಕ್ಷಿಣ ಭಾರತದಲ್ಲಿ ಸುಪ್ರೀಂ ಪೀಠ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಮನವಿ

CM Siddaramaiah appeals forSupreme Court bench in South India

ಬೆಂಗಳೂರು, ಏ.18- ತ್ವರಿತ ನ್ಯಾಯದಾನ ಸಲುವಾಗಿ ದಕ್ಷಿಣ ಭಾರತದಲ್ಲಿ ಸುಪ್ರೀಕೋರ್ಟಿನ ನ್ಯಾಯ ಪೀಠವನ್ನು ಸ್ಥಾಪಿಸಬೇಕೆಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಕೃತಕ ಬುದ್ಧಿ ಮತ್ತೆಯ ಯುಗದಲ್ಲಿ ನ್ಯಾಯಾಂಗವನ್ನು ಪುನರ್‌ ನಿರ್ಮಿಸುವುದು ಎಂಬ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ವತಿಯಿಂದ ಆಯೋಜಿ ಸಲಾಗಿದ್ದ ನ್ಯಾಯಾಂಗ ಅಧಿಕಾರಿಗಳ ದ್ವೈವಾರ್ಷಿಕ ರಾಜ್ಯ ಸಮೇಳನದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಸಂಸ್ಥೆಗಳು ಅಪೂರ್ವ ತಾಂತ್ರಿಕ ಬದಲಾವಣೆಗಳಿಂದ ರೂಪಾಂತರಗೊಳ್ಳುತ್ತಿರುವ ಈ ಸಮಯದಲ್ಲಿ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನ್ಯಾಯಾಂಗ ಪುನರ್‌ ಕಲ್ಪನೆ ಎಂಬ ಈ ಸಮೇಳನ ಅತ್ಯಂತ ಪ್ರಾಮುಖ್ಯ ಹೊಂದಿದೆ ಎಂದು ಹೇಳಿದರು.

ಕಾನೂನು ಮತ್ತು ತಂತ್ರಜ್ಞಾನ ಇನ್ನು ಪ್ರತ್ಯೇಕ ಕ್ಷೇತ್ರಗಳಲ್ಲ, ಆಡಳಿತ, ಹಕ್ಕುಗಳು ಮತ್ತು ನ್ಯಾಯದ ಸ್ವರೂಪವನ್ನೇ ರೂಪಿಸುವ ಪರಸ್ಪರ ಸಂಬಂಧಿತ ಶಕ್ತಿಗಳಾಗಿವೆ. ಕೃತಕ ಬುದ್ಧಿಮತ್ತೆ ಸಾಕ್ಷ್ಯಗಳ ವಿಶ್ಲೇಷಣೆ, ಸತ್ಯಗಳ ಅರ್ಥೈಸುವಿಕೆ ಮತ್ತು ತೀರ್ಮಾನಗಳ ಪ್ರಕ್ರಿಯೆಗಳಲ್ಲಿ ಬದಲಾವಣೆ ತರುತ್ತಿದೆ.

ಇದು ವೇಗವಾದ ಕಾನೂನು ಸಂಶೋಧನೆ, ಉತ್ತಮ ಪ್ರಕರಣ ನಿರ್ವಹಣೆ ಮತ್ತು ಬಾಕಿ ಪ್ರಕರಣಗಳ ಇಳಿಕೆಗೆ ಸಹಕಾರಿಯಾಗಲಿದೆ. ಆದರೆ, ಕ್ರಮಾವಳಿಗಳ (ಅಲ್ಗೋರಿದಮ್‌) ಆಧರಿತ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆ ಎಂಬ ತತ್ವವನ್ನು ದುರ್ಬಲಗೊಳಿಸಬಹುದು. ಪಾರದರ್ಶಕತೆಯ ಕೊರತೆ ನ್ಯಾಯಾಂಗ ತೀರ್ಪಿನ ತಾರ್ಕಿಕತೆಯನ್ನು ಹಿನ್ನಡೆಯಾಗಿಸಬಹುದು ಎಂದು ಎಚ್ಚರಿಸಿದ್ದಾರೆ.

ನ್ಯಾಯಾಂಗ ಸ್ವಾತಂತ್ರ್ಯ ನಮ ಪ್ರಜಾಸತ್ತಾತಕ ವ್ಯವಸ್ಥೆಯ ಆಧಾರವಾಗಿದ್ದು, ಹೊರಗಿನ ಒತ್ತಡಗಳಷ್ಟೇ ಅಲ್ಲ, ತಾಂತ್ರಿಕ ಅವಲಂಬನೆಯಿಂದಲೂ ಅದನ್ನು ಕಾಪಾಡಬೇಕು. ನ್ಯಾಯಾಧೀಶರ ಅಧಿಕಾರಕ್ಕೆ ಕ್ರಮಾವಳಿಗಳಿಂದ ಧಕ್ಕೆಯಾಗಬಾರದು. ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹೇಳಿದಂತೆ, ಸಾಂವಿಧಾನಿಕ ನೈತಿಕತೆ ಸ್ವಾಭಾವಿಕವಲ್ಲ, ಅದನ್ನು ಬೆಳೆಸಬೇಕು.

ತಂತ್ರಜ್ಞಾನವು ಸಂವಿಧಾನ ಮೌಲ್ಯಗಳಿಗೆ ಅನುಗುಣವಾಗಿರಬೇಕು. ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಸಾಕ್ಷ್ಯಗಳು ಡೀಪ್‌ಫೇಕ್‌, ಕೃತಕ ಡೇಟಾ ಮತ್ತು ಯಂತ್ರ ನಿರ್ಮಿತ ದತ್ತಾಂಶಗಳು ನ್ಯಾಯಾಂಗಕ್ಕೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಸಾಕ್ಷ್ಯದ ಸ್ವೀಕಾರಾರ್ಹತೆ, ಹೊಣೆಗಾರಿಕೆ ಮತ್ತು ನೈಜತೆ ಕುರಿತಂತೆ ಹೊಸ ಚಿಂತನೆಗಳ ಅಗತ್ಯವಿದೆ ಎಂದಿದ್ದಾರೆ.

ಡಿಜಿಟಲ್‌ ಯುಗದಲ್ಲಿ ನಂಬಿಕಾರ್ಹ ಸಾಕ್ಷ್ಯ ಎಂದರೇನು ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಬೇಕಾಗುತ್ತದೆ. ಸತ್ಯವು ತಾಂತ್ರಿಕತೆಯ ಮೇಲೆ ಅಲ್ಲ, ಪರಿಶೀಲನೆ ಮತ್ತು ನೈತಿಕತೆಯ ಮೇಲೆ ಆಧಾರವಾಗಿರಬೇಕು. ನಿಯಂತ್ರಣದ ರೂಪುರೇಷೆಗಳನ್ನು ರೂಪಿಸುವಲ್ಲಿ ನ್ಯಾಯಾಂಗ ಪ್ರಮುಖ ಪಾತ್ರ ವಹಿಸುತ್ತದೆ. ನ್ಯಾಯಸಮತ ಪ್ರಕ್ರಿಯೆ, ಸಮಾನುಪಾತತೆ ಮತ್ತು ಗೌಪ್ಯತೆ ಹಕ್ಕುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಬೇಕು ಎಂದು ಹೇಳಿದರು.ನ್ಯಾಯಾಂಗದಲ್ಲಿ ತಂತ್ರಜ್ಞಾನವು ಬಳಕೆ ಮಾತ್ರವಲ್ಲದೆ, ನೈತಿಕ ದಿಕ್ಕು ತೋರಿಸುವ ಮಾರ್ಗದರ್ಶಕವೂ ಆಗಿರಬೇಕು.

ಕೃತಕ ಬುದ್ಧಿ ಮತ್ತೆ ಆಧರಿತ ಕಾನೂನು ಸಂಶೋಧನೆ, ಬ್ಲಾಕ್‌ಚೈನ್‌ ತಂತ್ರಜ್ಞಾನದ ಮೂಲಕ ದಾಖಲೆಗಳ ಸುರಕ್ಷತೆ ಹಾಗೂ ಪ್ರಕರಣಗಳ ನಿರ್ವಹಣೆ ನ್ಯಾಯಾಂಗವನ್ನು ಬಲಪಡಿಸಬಹುದು. ಆದರೆ ಕಾರ್ಯಕ್ಷಮತೆಯೊಂದಿಗೆ ನ್ಯಾಯತತ್ವವನ್ನು ಕಾಪಾಡಬೇಕಿದೆ ಎಂದು ಸಲಹೆ ನೀಡಿದರು.

ಭವಿಷ್ಯದಲ್ಲಿ ನ್ಯಾಯಾಧೀಶರು ಕಾನೂನು ಜ್ಞಾನದ ಜೊತೆಗೆ ತಂತ್ರಜ್ಞಾನದ ಅರಿವು ಹೊಂದಿರಬೇಕು. ಕೃತಕ ಬುದ್ಧಿಮತ್ತೆ ಮೂಲಭೂತ, ಸಾಮಾಜಿಕ ನ್ಯಾಯತತ್ವದ ಸಂಬಂಧ ಹೇಗೆ ವ್ಯವಹರಿಸುತ್ತದೆ ಎಂಬುದು ಬಹು ಮುಖ್ಯವಾಗಿದೆ. ಸರಿಯಾದ ನಿಯಂತ್ರಣವಿಲ್ಲದಿದ್ದರೆ ಇದು ಅಸಮಾನತೆಗಳನ್ನು ಹೆಚ್ಚಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾತಿ, ವರ್ಗ ಮತ್ತು ಪ್ರವೇಶ ಸಂಬಂಧಿತ ಪಕ್ಷಪಾತವನ್ನು ಗಟ್ಟಿಗೊಳಿಸುವ ಅಪಾಯವಿದೆ. ಬುದ್ಧನ ಕರುಣೆ ಮತ್ತು ಬಸವಣ್ಣನ ಸಮಾನತೆಯ ತತ್ವಗಳಿಂದ ಪ್ರೇರಣೆ ಪಡೆದು ನ್ಯಾಯ ಮಾನವೀಯವಾಗಿರಬೇಕು. ಡಾ. ಅಂಬೇಡ್ಕರ್‌ ಅವರು ರಾಜಕೀಯ ಪ್ರಜಾಸತ್ತಾತಕತೆ, ಸಾಮಾಜಿಕ ಪ್ರಜಾಸತ್ತಾತಕತೆಯಿಲ್ಲದೆ ಉಳಿಯುವುದಿಲ್ಲ ಎಂದಿದ್ದಾರೆ ಎಂದು ಸರಿಸಿಕೊಂಡರು.

ಬಾಕಿ ಪ್ರಕರಣಗಳ ಸಮಸ್ಯೆ ಇನ್ನೂ ಗಂಭೀರವಾಗಿದೆ. ತಂತ್ರಜ್ಞಾನ ಜೊತೆಗೆ ಮೂಲಸೌಕರ್ಯ ವೃದ್ಧಿ, ನ್ಯಾಯಾಧೀಶರ ಸಂಖ್ಯೆ ಹೆಚ್ಚಳ ಮತ್ತು ಪ್ರಕ್ರಿಯೆಗಳ ಆಧುನೀಕರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪನೆ ಅಗತ್ಯವಿದೆ. ಇದು ನ್ಯಾಯದಾನವನ್ನು ಸುಧಾರಿಸುತ್ತದೆ ಎಂದು ಹೇಳಿದರು.

ನ್ಯಾಯಾಂಗವನ್ನು ಬೆಂಬಲಿಸಲು ಸರ್ಕಾರ ಬದ್ಧವಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಡಿಜಿಟಲ್‌ ಪರಿವರ್ತನೆಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ರಾಜ್ಯದಲ್ಲಿ ವೇಗವಾದ ನ್ಯಾಯಕ್ಕಾಗಿ ಸಮಯಬದ್ಧ ಪ್ರಕರಣ ನಿರ್ವಹಣೆ, ಮೇಲಟ್ಟದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿತ ಮತ್ತು ಸರ್ಕಾರದ ಪ್ರಕರಣಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ನ್ಯಾಯಾಂಗ ಮೂಲಸೌಕರ್ಯ ಬಲಪಡಿಸುವುದು, ಖಾಲಿ ಹುದ್ದೆಗಳ ಭರ್ತಿ, ಸ್ಥಳೀಯ ಭಾಷೆಯಲ್ಲಿ ನ್ಯಾಯದ ಲಭ್ಯತೆ ಮತ್ತು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸರ್ಕಾರ ಒತ್ತು ನೀಡುತ್ತದೆ. ನ್ಯಾಯವು ಕೇವಲ ಕಾರ್ಯಕ್ಷಮತೆಯ ವಿಷಯವಲ್ಲ. ಅದು ನೈತಿಕ ಹೊಣೆಗಾರಿಕೆ. ಯಾವುದೇ ತಂತ್ರಜ್ಞಾನ ಮಾನವೀಯತೆ, ಅನುಭವ ಮತ್ತು ನೈತಿಕ ಚಿಂತನೆಗೆ ಪರ್ಯಾಯವಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಇಂದಿನ ಸಮೇಳನದಲ್ಲಿ ನಡೆಯುವ ಚರ್ಚೆಗಳು ತಾಂತ್ರಿಕವಾಗಿ ಅಭಿವೃದ್ಧಿಯಾದ, ಸಂವಿಧಾನ ಮೌಲ್ಯಾಧರಿತ ಮತ್ತು ಸಾಮಾಜಿಕ ನ್ಯಾಯ ಹೊಂದಿದ ನ್ಯಾಯಾಂಗ ನಿರ್ಮಾಣಕ್ಕೆ ನೆರವಾಗುತ್ತವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌, ಬಿ.ವಿ.ನಾಗರತ್ನ, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಕರ್ನಾಟಕ ರಾಜ್ಯ ನ್ಯಾಯಾಂಗ ಸಂಘದ ಅಧ್ಯಕ್ಷರಾದ ಎಸ್‌‍.ನಾಗಶ್ರೀ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News