ನವದೆಹಲಿ, ಏ.18- ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಂಚು ರೂಪಿಸಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋತಿರುವುದು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ವಿರೋಧ ಪಕ್ಷಗಳ ಏಕತೆಯ ಗೆಲುವಾಗಿದೆ ಎಂದು ಹೇಳಿದ್ದಾರೆ.
ನಿನ್ನೆ ನಡೆದದ್ದು ಪ್ರಜಾಪ್ರಭುತ್ವದ ದೊಡ್ಡ ಗೆಲುವು. ಒಕ್ಕೂಟ ವ್ಯವಸ್ಥೆ ಬದಲಿಸುವ ಸಂಚು ಸೋತಿದೆ. 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಪ್ರಸ್ತುತ ಲೋಕಸಭೆಯ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಜಾರಿಗೆ ತರಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಪಕ್ಷವು ವರ್ಷಗಳ ಕಾಲ ಆಡಳಿತ ಪಕ್ಷದ ಟ್ರಜರಿ ಬೆಂಚುಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವುದು ಅವರ ಮನೋಭಾವವನ್ನು ತೋರಿಸುತ್ತದೆ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದರು.
ಸರ್ಕಾರದ ಉದ್ದೇಶ ಅಧಿಕಾರದಲ್ಲಿ ಮುಂದುವರಿಯುವುದೇ ಆಗಿದ್ದು, 2029ರೊಳಗೆ ಕ್ಷೇತ್ರ ಮರುವಿಂಗಡಣೆೆ ನಡೆಯದಿದ್ದರೆ ತಮ ರಾಜಕೀಯ ಲಾಭಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಮಹಿಳಾ ಮೀಸಲಾತಿಯೊಂದಿಗೆ ಸಂಸತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕ್ರಮ ಕೈಗೊಂಡಿದ್ದರು ಎಂದು ಆರೋಪಿಸಿದರು.
ಮಹಿಳೆಯರ ಹೆಸರಿನಲ್ಲಿ ಈ ಕ್ರಮವನ್ನು ನ್ಯಾಯೀಕರಿಸಲು ಪ್ರಯತ್ನಿಸಲಾಗಿದ್ದು, ಮಸೂದೆ ಅಂಗೀಕಾರವಾದರೂ ಅಥವಾ ತಿರಸ್ಕೃತವಾದರೂ ವಿರೋಧ ಪಕ್ಷಗಳನ್ನು ಮಹಿಳಾ ವಿರೋಧಿಗಳಾಗಿ ಚಿತ್ರಿಸುವ ಯೋಜನೆ ಇದಾಗಿತ್ತು ಎಂದು ಹೇಳಿದರು.
ಮಹಿಳೆಯರ ರಕ್ಷಕರಾಗಿ ತೋರಿಸಿಕೊಳ್ಳುವುದು ಸುಲಭವಲ್ಲ. ಹತ್ರಾಸ್ ಘಟನೆ, ಒಲಿಂಪಿಕ್ ಪದಕ ವಿಜೇತ ಮಹಿಳಾ ಕ್ರೀಡಾಪಟುಗಳ ವಿರುದ್ಧ ನಡೆದ ಘಟನೆಗಳನ್ನು ನಾವು ನೋಡಿದ್ದೇವೆ ಎಂದು ಪ್ರಿಯಾಂಕ ವಾದ್ರಾ ಆಕ್ರೋಶ ವ್ಯಕ್ತಪಡಿಸಿದರು.ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಪಕ್ಷಗಳು ಬೆಂಬಲ ನೀಡಲು ಸಾಧ್ಯವಾಗಲಿಲ್ಲ. ಆದರೆ, ಏಕತೆಯಿಂದ ಇದ್ದರೆ ಸರ್ಕಾರವನ್ನು ಸೋಲಿಸಬಹುದು ಎಂಬುದನ್ನು ಇದು ತೋರಿಸಿದೆ ಎಂದು ಅವರು ಹೇಳಿದರು.
