Saturday, April 18, 2026
Homeಇದೀಗ ಬಂದ ಸುದ್ದಿಸಿದ್ದರಾಮಯ್ಯ ಬಣದ ನಾಯಕರೇ ಡಿಕೆಶಿ ಟಾರ್ಗೆಟ್‌ : ಅಶೋಕ್‌ ವ್ಯಂಗ್ಯ

ಸಿದ್ದರಾಮಯ್ಯ ಬಣದ ನಾಯಕರೇ ಡಿಕೆಶಿ ಟಾರ್ಗೆಟ್‌ : ಅಶೋಕ್‌ ವ್ಯಂಗ್ಯ

Siddaramaiah supporting leaders are DK Shivkumar's target: Ashok's sarcasm

ಬೆಂಗಳೂರು,ಏ.18- ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೊಡಿ ಮಗ ಹೊಡಿ ಮಗ ಎನ್ನುವಂತೆ ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಾಜಣ್ಣ ಹೇಳಿದಂತೆ ಸಿದ್ದರಾಮಯ್ಯ ಈಗ ಮೊದಲಿನಂತಿಲ್ಲ. ಕುರ್ಚಿ ಉಳಿಸಿಕೊಳ್ಳಲು ಅವರು ಅಸಹಾಯಕರಾಗಿಯೇ ಇದ್ದಾರೆ. ಅವರ ಜೊತೆ ಗುರುತಿಸಿಕೊಂಡಿದ್ದ ಮಾಜಿ ಸಚಿವ ನಾಗೇಂದ್ರ, ರಾಜಣ್ಣ, ಗೋವಿಂದರಾಜ್‌, ಅಬ್ದುಲ್‌ ಜಬ್ಬಾರ್‌ ಹೀಗೆ ಹಲವರನ್ನು ಡಿ.ಕೆ.ಶಿವಕುಮಾರ್‌ ಟಾರ್ಗೆಟ್‌ ಮಾಡಿದ್ದಾರೆ ಎಂದು ಎಚ್ಚರಿಸಿದರು.

ಆದರೆ ಡಿಕೆಶಿ ದೊಡ್ಡದೊಡ್ಡವರನ್ನು ಬಿಟ್ಟು ಕೇವಲ ಸಣ್ಣಪುಟ್ಟ ಹುಳಹುಪ್ಪಡಿಗಳನ್ನು ಹುಡುಕಿ ಹೊಡೆಯುತ್ತಿದ್ದಾರೆ. ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಬಲೆಗೆ ಬೀಳಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಅವರು ಬೀಳುತ್ತಿಲ್ಲ, ಇವರು ಬಿಡುತ್ತಿಲ್ಲ. ಇನ್ನು ಯಾವ ಹಂತಕ್ಕೆ ಹೋಗುತ್ತದೆಯೋ ಗೊತ್ತಿಲ್ಲ ಎಂದರು.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಸರ್ಕಾರ ವಿದ್ಯುತ್‌ ದರ ಪರಿಷ್ಕರಣೆ ಮಾಡಿ ಮತ್ತೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ. ಈಗಾಗಲೇ ಮೂರು ವರ್ಷ 65 ಸಾವಿರ ಕೋಟಿ ರೂ ದರ ಏರಿಕೆ ಮಾಡಿದ್ದಾರೆ. ಬೈಎಲೆಕ್ಷನ್‌ ಮುಗಿದಿದೆ, ಮತ್ತೆ ದರ ಏರಿಕೆ ಮುಂದುವರೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಜನ ಸಾಲು ಸಾಲು ತೆರಿಗೆ ಭಾರ ಹೊರಲು ತಯಾರಾಗಬೇಕು. ಸರ್ಕಾರದಲ್ಲಿ ಸಂಬಳ ಕೊಡಲೂ ಹಣ ಇಲ್ಲ. ಭಿಕ್ಷುಕರಿಗೆ, ಅನಾಥ ಮಕ್ಕಳಿಗೆ, ವೈದ್ಯರಿಗೆ, ಅಂಗನವಾಡಿ ಕಾರ್ಯಕರ್ತೆೆಯರಿಗೆ ಹಣ ಕೊಡಲು ಇಲ್ಲ ಎಂದು ಆರೋಪಿಸಿದರು.

ಸೋಲುವ ಭೀತಿಯಿಂದಾಗಿ ರಾಜ್ಯಸರ್ಕಾರ ಜಿಬಿಎ ಚುನಾವಣೆ ನಡೆಸುವ ಸನ್ನಿವೇಶದಲ್ಲಿಲ್ಲ. ಹೀಗಾಗಿ ಕುಂಟುನೆಪ ಹೇಳಿ ಮುಂದೂಡುವ ಪ್ರಯತ್ನ ಮಾಡುತ್ತಿದೆ. ಚುನಾವಣೆ ನಡೆದರೆ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಗೊತ್ತಿದೆ. ಸೋಲು ಅವರಿಗೆ ನೆರಳಿನಂತೆ ಹಿಂದೆ ಬಿದ್ದಿದೆ. ಹೀಗಾಗಿ ಸೋಲುತ್ತೇವೆ ಎಂದು ಚುನಾವಣೆ ನಡೆಸುತ್ತ್ತಿಲ್ಲ. ಪಂಚ ಪಾಲಿಕೆ ಮಾಡಿದ್ದೇ ಚುನಾವಣೆ ಮಾಡಬಾರದು ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಬಿಜೆಪಿ ಸಂಚು ರೂಪಿಸಿದೆ ಎಂಬ ಡಿಕೆಶಿ ಆರೋಪಕ್ಕೆ ಅಶೋಕ್‌ ತಿರುಗೇಟು ನೀಡಿದರು.

ಕಾಂಗ್ರೆಸ್‌‍ನವರು ಏನೇ ಮಾಡಿದರೂ ತಪ್ಪಿಲ್ಲ. ಬಿಜೆಪಿಯವರು ಮಾತ್ರ ಅವರಿಗೆ ತಪ್ಪಾಗಿ ಕಾಣಿಸುತ್ತಾರೆ. ವಿನಯ್‌ ಕುಲಕರ್ಣಿಗೆ ಕೊಲೆ ಮಾಡಲು ಯಾರು ಹೇಳಿದ್ದರು? ಡಿಕೆಶಿ ಹೇಳಲಿ ಎಂದು ಸವಾಲು ಎಸೆದರು.ಕೊಲೆ ಮಾಡಿದ್ದು ಸಾಬೀತಾಗಿದೆ, ಕೋರ್ಟ್‌ ಶಿಕ್ಷೆ ಕೊಟ್ಟಿದೆ. ಇದರಲ್ಲಿ ಬಿಜೆಪಿ ಸಂಚು ಎಲ್ಲಿಂದ ಬರುತ್ತದೆ? ಎಂದು ಅಶೋಕ್‌ ಪ್ರಶ್ನಿಸಿದರು.

RELATED ARTICLES

Latest News