Saturday, April 18, 2026
Homeರಾಜ್ಯಹೈಕೋರ್ಟ್‌ ಪ್ರಸ್ತಾವನೆಗಳ ನಿರ್ಲಕ್ಷ್ಯ : ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ನ್ಯಾಯಮೂರ್ತಿಗಳ ಆಕ್ಷೇಪ

ಹೈಕೋರ್ಟ್‌ ಪ್ರಸ್ತಾವನೆಗಳ ನಿರ್ಲಕ್ಷ್ಯ : ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ನ್ಯಾಯಮೂರ್ತಿಗಳ ಆಕ್ಷೇಪ

High Court proposals ignored: Judges object in the presence of CM Siddaramaiah

ಬೆಂಗಳೂರು, ಏ.18- ಹೈಕೋರ್ಟ್‌ ಸಲ್ಲಿಸುವ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಮಂದಗತಿಯಲ್ಲಿ ಹಾಗೂ ಬೇಡಿಕೆಯನ್ನು ಕಡಿತ ಮಾಡಿ ಅನುಮೋದನೆ ನೀಡುತ್ತಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುಖದಲ್ಲೇ ತಮ್ಮ ತಗಾದೆಯನ್ನು ದಾಖಲು ಮಾಡಿದ ನ್ಯಾಯಮೂರ್ತಿಗಳು ಹೈಕೋರ್ಟ್‌ ಸಲ್ಲಿಸುವ ಪ್ರಸ್ತಾವನೆಯಲ್ಲಿ ಕನಿಷ್ಠ ಶೇ. 75 ರಿಂದ 80ರಷ್ಟು ಅನುಮೋದನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ಅಧಿಕಾರಿಗಳು ಮಂದಗತಿಯಲ್ಲಿ ವರ್ತಿಸುತ್ತಿದ್ದಾರೆ. ವ್ಯಾಜ್ಯಗಳು ದಾಖಲಾಗುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2023 ರಲ್ಲಿ 17 ಲಕ್ಷವಿದ್ದ ವ್ಯಾಜ್ಯಗಳು 2025ರಲ್ಲಿ 22 ಲಕ್ಷಗಳಾಗಿವೆ. ಹೊಸ ಕಾನೂನುಗಳು ಜಾರಿಯಾಗುತ್ತಿವೆ. ಅವುಗಳ ಅಡಿಯೂ ನ್ಯಾಯ ವಿತರಣೆ ಮಾಡಬೇಕಿದೆ ಎಂದಿದ್ದಾರೆ.

ಏಕಕಾಲದಲ್ಲಿ ನ್ಯಾಯಾಧೀಶರು ಹಾಗೂ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಹೈಕೋರ್ಟ್‌ ಸಲ್ಲಿಸುತ್ತಿರುವ ಪ್ರಸ್ತಾವನೆಗಳಲ್ಲಿ ರಾಜ್ಯ ಸರ್ಕಾರ ಕಡಿತಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು, ಕಲಬುರಗಿ, ಧಾರವಾಡ ಹೈಕೋರ್ಟ್‌ ಪೀಠಗಳಿಗೆ 2 ವರ್ಷದಿಂದ 666 ಹುದ್ದೆಗಳಿಗೆ ಬೇಡಿಕೆ ಸಲ್ಲಿಸಿದರೆ, ರಾಜ್ಯ ಸರ್ಕಾರ 238ಕ್ಕೆ ಮಾತ್ರ ಅನುಮೋದನೆ ನೀಡಿದೆ. 680 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ಬದಲಾಗಿ 400ಕ್ಕೆ ಮಾತ್ರ ಅನುಮತಿಸಲಾಗಿದೆ ಎಂದು ಹೇಳಿದರು.

3 ಮೂರು ವರ್ಷಗಳಲ್ಲಿ ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳು ನ್ಯಾಯಾಲಯದ ಶುಲ್ಕ, ದಂಡ, ಮುದ್ರಾಂಕ ಶುಲ್ಕ ಹೊರತುಪಡಿಸಿ 2023-24ರಲ್ಲಿ 376 ಕೋಟಿ, 2024-25ರಲ್ಲಿ 439 ಕೋಟಿ, 2025-26ರಲ್ಲಿ 470 ಕೋಟಿ ಆದಾಯ ಸಂಗ್ರಹಿಸಿವೆ. ಆದರೆ ಇದರ ವ್ಯತಿರಿಕ್ತವಾಗಿ ರಾಜ್ಯಸರ್ಕಾರ ಸಿಬ್ಬಂದಿಗಳ ವೇತನ ಹೊರತು ಪಡಿಸಿ ಇತರೆ ವೆಚ್ಚಗಳಿಗೆ 103 ಲಕ್ಷ, 40 ಲಕ್ಷ, 137 ಲಕ್ಷ, 141 ಲಕ್ಷದಂತೆ ವರ್ಷವಾರು ಅತ್ಯಂತ ಕಡಿಮೆ ಅನುದಾನ ನೀಡಿದೆ ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರ ಹೈಕೋರ್ಟ್‌ನ ಪ್ರಸ್ತಾವನೆಗಳಿಗೆ ಸ್ಪಂದಿಸಿದರೆ ನ್ಯಾಯಾಧೀಶರು ಕರ್ನಾಟಕವನ್ನು ನ್ಯಾಯದಾನದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡುತ್ತಾರೆ ಎಂದು ತಿಳಿಸಿದರು.

RELATED ARTICLES

Latest News