Monday, May 4, 2026
Homeಬೆಂಗಳೂರುಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

Today's Crime News from Bangalore

ಜಗಳ ಬಿಡಿಸಲು ಹೋದ ವ್ಯಕ್ತಿಯ ಕೊಲೆ :

ಬೆಂಗಳೂರು, ಮೇ4-ಬಾರ್‌ನಲ್ಲಿ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ ವ್ಯಕ್ತಿಯನ್ನು ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಆರ್‌ಟಿ ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಚಾಮುಂಡಿ ನಗರದ ನಿವಾಸಿ ಪುಟ್ಟಸ್ವಾಮಿ (45) ಕೊಲೆಯಾದ ವ್ಯಕ್ತಿ.

ಪುಟ್ಟಸ್ವಾಮಿ ತನ್ನ ಅಣ್ಣನ ಬಾರ್‌ ಅಂಡ್‌ ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಸ್ನೇಹಿತರ ಜೊತೆ ಚಾಮುಂಡಿ ನಗರದಲ್ಲಿರುವ ಬಾರ್‌ಗೆ ಹೋಗಿದ್ದರು. ಆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಬಾಟಲಿಗಳಿಂದ ಹೊಡೆದಾಡಿಕೊಳ್ಳುತ್ತಿರುವುದನ್ನು ಗಮನಿಸಿ ಬಾರ್‌ ಕ್ಯಾಷಿಯರ್‌ ಹಾಗೂ ಸಿಬ್ಬಂದಿ ಜಗಳ ಬಿಡಿಸುತ್ತಿದ್ದರು. ಈ ವೇಳೆ ಪುಟ್ಟಸ್ವಾಮಿ ಸಹ ಜಗಳ ಬಿಡಿಸಲು ಮಧ್ಯೆ ಪ್ರವೇಶಿಸಿದ್ದಾರೆ.

ಗುಂಪಿನಲ್ಲಿದ್ದ ಒಬ್ಬಾತ ಬಾಟಲಿಯಿಂದ ಪುಟ್ಟಸ್ವಾಮಿ ಎದೆ ಹಾಗೂ ಕಾಲಿಗೆ ಚುಚ್ಚಿದ್ದಾನೆ. ತೀವ್ರ ರಕ್ತ ಸೋರಿಕೆಯಾಗುತ್ತಿದ್ದರೂ ಆಸ್ಪತ್ರೆಗೆ ಹೋಗದೆ ನಡೆದುಕೊಂಡೇ ಮನೆಗೆ ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ಆರ್‌ಟಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಬಾರ್‌ನಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿದ್ದಾರೆ.

ಗಂಡನ ಕಿರುಕುಳ : ಮನೆ ತೊರೆದ ಮಹಿಳೆ

ಬೆಂಗಳೂರು, ಮೇ4-ಪತಿಯ ಕಿರುಕುಳದಿಂದ ಬೇಸತ್ತು ಮೂವರು ಮಕ್ಕಳೊಂದಿಗೆ ಮಹಿಳೆ ಮನೆ ತೊರೆದು ಬೇರೆಡೆ ವಾಸವಾಗಿರುವುದು ವಿವೇಕನಗರ ಠಾಣೆ ಪೊಲಿಸರ ತನಿಖೆಯಿಂದ ಗೊತ್ತಾಗಿದೆ. ಪತ್ನಿ ಕಾಣೆಯಾಗಿದ್ದಾಳೆಂದು ಪತಿ ದೂರು ನೀಡಿದ್ದ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈ ಮಾಹಿತಿ ಲಭ್ಯವಾಗಿದೆ.

ಸುದ್ದಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತಾವರೆಕೆರೆ ನಿವಾಸಿ ರವಿಬಾಬು ಎಂಬುವವರು ನಗರದ ಆಸ್ಟಿನ್‌ ಟೌನ್‌ ನಿವಾಸಿಯಾಗಿರುವ ಮಹಿಳೆಯನ್ನು 16 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ.

ಮನೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ರವಿಬಾಬು ಅವರ ಪತ್ನಿ ತನ್ನ ಮೂವರು ಮಕ್ಕಳನ್ನು ಕರೆದುಕೊಂದು ತವರು ಮನೆಗೆ ಹೋಗಿದ್ದಾರೆ. ಆಕೆಯ ತವರಿನಲ್ಲಿ ಈಕೆಯೊಂದಿಗೆ ಜಗಳವಾಗಿದ್ದರಿಂದ ಬೇಸತ್ತು ತನ್ನ ಮೂರು ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆಂದು ಹಾಗೂ ಒಂದು ಮಗುವನ್ನು ಮಾರಿದ್ದಾಳೆಂದು ವಿವೇಕನಗರ ಪೊಲೀಸ್‌ ಠಾಣೆಗೆ ರವಿ ಬಾಬು ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಮಹಿಳೆ ನಾಪತ್ತೆಯಾಗಿಲ್ಲ, ಮಗುವನ್ನೂ ಮಾರಿಲ್ಲ ಮೂವರು ಮಕ್ಕಳು ಸುರಕ್ಷಿತವಾಗಿವೆ, ಆಕೆ ಗಂಡನ ಕಿರುಕುಳಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದಾಳೆಂಬುವುದು ಗೊತ್ತಾಗಿದೆ.

ಮಹಿಳಾ ಕಂಡಕ್ಟರ್‌ಗೆ ಹೆಲೆಟ್‌ನಿಂದ ಹಲ್ಲೆ : ಆರೋಪಿ ಪತ್ತೆಗೆ ಕಾರ್ಯಾಚರಣೆ

ಬೆಂಗಳೂರು, ಮೇ4-ದ್ವಿಚಕ್ರ ವಾಹನ ಸವಾರನ್ನೊಬ್ಬ ಮಾರ್ಗಮಧ್ಯೆ ಜಾಗ ಬಿಡದ ಮಹಿಳಾ ಬಸ್‌ ಕಂಡಕ್ಟರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೆಲ್ಮೆಟ್‌ನಿಂದ ತಲೆಗೆ ಒಡೆದು ಹಲ್ಲೆ ನಡೆಸಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರ್‌ಆರ್‌ ನಗರ ಬಿಎಂಟಿಸಿ ಘಟಕ-21ರ ಮಹಿಳಾ ಕಂಡಕ್ಟರ್‌ ಮಂಗಳಾ ಎಂಬುವವರು ಅವರ ಪತಿ (ಡ್ರೈವರ್‌) ಚಲಾಯಿಸುತ್ತಿದ್ದ ಬಸ್‌ನಲ್ಲೇ ನಿನ್ನೆ ಕರ್ತವ್ಯದಲ್ಲಿ ಇದ್ದರು.

ನಿನ್ನೆ ಸಂಜೆ 4 ಗಂಟೆ ಸುಮಾರಿನಲ್ಲಿ ಈ ಬಸ್‌ ಬಾಪೂಜಿನಗರ ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದುಕೊಂಡು ಮೈಸೂರು ಮಾರ್ಗವಾಗಿ ಹೋಗುತ್ತಿದ್ದಾಗ ಕೆಂಗೇರಿಯ ಪೆಟ್ರೋಲ್‌ ಬಂಕ್‌ ಬಳಿಯ ಸಿಗ್ನಲ್‌ ಬಳಿ ಜಾಮ್‌ ಆಗಿದೆ.

ಅದೇ ಸಂದರ್ಭದಲ್ಲಿ ಆ್ಯಂಬುಲೆನ್‌್ಸ ಇದೇ ಮಾರ್ಗವಾಗಿ ಬಂದಿದೆ. ಅಕ್ಕಪಕ್ಕ ವಾಹನಗಳಿದ್ದ ಕಾರಣ ಆ್ಯಂಬುಲೆನ್‌್ಸ ಗೆ ಜಾಗ ಕೊಡಲು ಸಾಧ್ಯವಾಗಲಿಲ್ಲ, ಆ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರನ್ನೊಬ್ಬ ಏಕಾಏಕಿ ಬಸ್‌ ಹತ್ತಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆ ಸಂದರ್ಭದಲ್ಲಿ ಮಹಿಳಾ ಕಂಡಕ್ಟರ್‌ ಮಂಗಳಾ ಅವರು ಸಮಾಧಾನ ಹೇಳಿ ಆತನನ್ನು ಬಸ್ಸಿನಿಂದ ಇಳಿಯುವಂತೆ ಸೂಚಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಆತ ಕೆಳಗಿಳಿದು ಮಹಿಳಾ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಹೆಲ್ಮೆಟ್‌ನಿಂದ ತಲೆಗೆ ಹೊಡೆದಿದ್ದಾನೆ. ಹಲ್ಲೆಯಿಂದ ಗಾಯಗೊಂಡಿರು ಮಹಿಳಾ ಕಂಡಕ್ಟರ್‌ ಈ ಬಗ್ಗೆ ಕೆಂಗೇರಿ ಠಾಣೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್‌ನಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಕಾರಿನಲ್ಲಿ ಮಹಿಳೆ ಸುಟ್ಟು ಬೂದಿಯಾದ ಪ್ರಕರಣ ಪರಾರಿಯಾಗಿದ್ದ ವ್ಯಕ್ತಿ ಆತಹತ್ಯೆ

ದೊಡ್ಡಬಳ್ಳಾಪುರ, ಮೇ 4- ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಕಾರು ಬೆಂಕಿಗೆ ಆಹುತಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಾರಿಯಾಗಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಆತಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತನನ್ನು ಮಾರಸಂದ್ರ ಗ್ರಾಮದ ನಿವಾಸಿ ರಾಮಾಂಜಿನಪ್ಪ (46) ಎಂದು ಗುರುತಿಸಲಾಗಿದೆ.ಈತ ಬಿಡದಿ ಸಮೀಪ ರೈಲಿಗೆ ಸಿಲುಕಿ ಆತಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ಮೆಜೆಸ್ಟಿಕ್‌ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರದಂದು ಜಿಂಕೆಬಚ್ಚಹಳ್ಳಿ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರೊಳಗೆ ಮಹಿಳೆಯೊಬ್ಬರು ಸುಟ್ಟು ಕರಕಲಾಗಿದ್ದ ಘಟನೆ ನಡೆದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನೊಳಗೆ ಮಹಿಳೆಯ ಅವಶೇಷಗಳನ್ನು ಪತ್ತೆ ಹಚ್ಚಿದ್ದರು.ಪತ್ತೆಯಾದ ಕಾರು ಮಾರಸಂದ್ರ ನಿವಾಸಿ ಸುರೇಶ್‌ ಅವರಿಗೆ ಸೇರಿದ್ದಾಗಿದ್ದು, ಅನಾರೋಗ್ಯದ ಕಾರಣ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಪಕ್ಕದ ಮನೆಯ ರಾಮಾಂಜಿನಪ್ಪ ಕಾರನ್ನು ತೆಗೆದುಕೊಂಡು ಹೋಗಿದ್ದನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಘಟನಾ ಸ್ಥಳದ ಸಮೀಪ ರಾಮಾಂಜಿನಪ್ಪನದ್ದೆಂದು ಶಂಕಿಸಲಾದ ಅರೆ ಬೆಂದ ಅಂಗಿ ಹಾಗೂ ಮೊಬೈಲ್‌ ಫೋನ್‌ ಪತ್ತೆಯಾಗಿದ್ದರ ಹಿನ್ನೆಲೆ ಅನುಮಾನ ವ್ಯಕ್ತವಾಗಿತ್ತು. ಅನೈತಿಕ ಸಂಬಂಧದ ಹಿನ್ನೆಲೆ ಈ ಕೃತ್ಯ ನಡೆದಿರಬಹುದೆಂಬ ಶಂಕೆಯಿಂದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಆತ ಆತಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಕಾರಿನೊಳಗೆ ಸುಟ್ಟು ಕರಕಲಾಗಿದ್ದ ಮೃತ ಮಹಿಳೆಯನ್ನು ದೇವನಹಳ್ಳಿ ತಾಲೂಕಿನ ಸುಜಾತ (35) ಎಂದು ಗುರುತಿಸಲಾಗಿದೆ. ಗೌರಿಬಿದನೂರಿನ ತಾಯಿಯ ಮನೆಯಿಂದ ಗಂಡನ ಮನೆಗೆ ಹೋಗುವುದಾಗಿ ತೆರಳಿದ್ದರು ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಡಿವೈಎಸ್‌‍ಪಿ ಪಾಂಡುರಂಗ ಹಾಗೂ ಇನ್‌ಸ್ಪೆಕ್ಟರ್‌ ಸಾದಿಕ್‌ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರಿನ ಮಾಲೀಕ ಸುರೇಶ್‌ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

RELATED ARTICLES

Latest News