ಬೆಂಗಳೂರು, ಮೇ 4-ಸವಾಲು ಹಾಕಿದಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮಣಿಸಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತ ಮುಖಂಡರ ಅಸಮಾಧಾನ, ವಿರೋಧ, ಮುನಿಸಿನ ನಡುವೆಯೂ ಕಾಂಗ್ರೆಸ್ ಜಯ ಗಳಿಸಿದೆ. ಆದರೆ, ಕಾಂಗ್ರೆಸ್‌ಗೆ ಪಾಠ ಕಲಿಸುವ ಬೆದರಿಕೆ ಹಾಕಿದ್ದ ಅಲ್ಪ ಸಂಖ್ಯಾತರೇ ಸೋತು ಪಾಠ ಕಲಿತಂತಾಗಿದೆ.
ಅಲ್ಪ ಸಂಖ್ಯಾತರ ನಿರೀಕ್ಷಿತ ಬೆಂಬಲ ದೊರೆಯದಿದ್ದರೂ ಗೆಲ್ಲಬಹದು ಎಂಬುದನ್ನು ಕಾಂಗ್ರೆಸ್‌ಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶವು ದಾರಿ ತೋರಿಸಿಕೊಟ್ಟಿದೆ. ಅಲ್ಪಸಂಖ್ಯಾತ ಮುಖಂಡರ ಅಸಮಾಧಾನದ ನಡುವೆಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಮನೂರು ಮಲ್ಲಿಕಾರ್ಜುನ ಅವರು 69,578 ಮತಗಳನ್ನು ಪಡೆದು ಬಿಜೆಪಿ 5,708 ಮತಗಳ ಅಂತರದಿಂದಗೆಲುವು ಸಾಧಿಸಿದ್ದಾರೆ.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಕಳೆದ ಚುನಾವಣೆಯಲ್ಲಿ 84,298 ಮತಗಳನ್ನು ಪಡೆದು, 27,880 ಮತಗಳ ಅಂತರದಿಂದ ಚುನಾಯಿತರಾಗಿದ್ದರು.ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೆಲವು ಅಲ್ಪಸಂಖ್ಯಾತರು ಪ್ರಚಾರದಿಂದ ದೂರ ಸರಿದ ಪರಿಣಾಮ ನಿರೀಕ್ಷೆಯಂತೆ ಕಾಂಗ್ರೆಸ್‌ಗೆ ಗೆಲುವಿನ ಅಂತರ ಕಡಿಮೆಯಾಗಿದೆ.
ಕೊನೆ ಘಳಿಗೆಯಲ್ಲಿ ಸಚಿವ ಜಮೀರ್ ಅಹದ್ ಖಾನ್ ಪ್ರಚಾರದಲ್ಲಿ ಭಾಗಿಯಾದದ್ದು, ಅಲ್ಪಸಂಖ್ಯಾತರ ಅಸಮಧಾನ ಕಡಿಮೆಯಾಗಲು ಸಹಕಾರಿಯಾಗಿತ್ತು. ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದು ಆ ಸಮುದಾಯದ ಮುಖಂಡರು ಆಗ್ರಹಿಸಿದ್ದರು. ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವರಿಷ್ಠರು ಅಲ್ಪಸಂಖ್ಯಾತರ ಬೇಡಿಕೆಯನ್ನು ಪರಿಗಣಿಸದೇ ಸಮರ್ಥ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣಾ ಕಣಕ್ಕಿಳಿಸಿತ್ತು.
ಇದು ತೀವ್ರ ಸಮಾಧಾನಕ್ಕೆ ಕಾರಣವಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದರು. ಅಲ್ಪಸಂಖ್ಯಾತರ ನಡವಳಿಕೆಯಿಂದ ಬೇಸತ್ತ ಕಾಂಗ್ರೆಸ್ ಅವರ ಮುಖಂಡರ ವಿರುದ್ಧ ಶಿಸ್ತುಕ್ರಮವನ್ನು ಕೈಗೊಂಡಿತ್ತು. ಇದು ರಾಜ್ಯ ಕಾಂಗ್ರೆಸ್‌ನಲ್ಲಿ ಆತಂಕರಿಕವಾಗಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ರಾಜಕೀಯ ಚರ್ಚೆಗೂ ಎಡೆಮಾಡಿ ಕೊಟ್ಟಿತ್ತು. ಸಂಧಾನ ಸಭೆಗಳನ್ನು ನಡೆಸಲಾಗಿತ್ತು.
ಈ ಉಪ ಚುನಾವಣೆಯಲ್ಲಿ ಎಸ್‌ಡಿಪಿಐ ಮತ್ತು ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 14 ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಒಟ್ಟಾರೆ ಪಡೆದ ಮತಗಳು 25 ಸಾವಿರ ಗಡಿ ದಾಟಲಿಲ್ಲ. ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 18,975 ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಿ.ಸೈಯದ್ ರಿಯಾಜ್ 1186 ಮತಗಳು ಹಾಗೂ ಖಾದರ ಅದಿಲ್ ಬಾಷ 1082 ಮತಗಳನ್ನು ಪಡೆದು ಮೂರಂಕಿಯ ಮತಗಳನ್ನು ಪಡೆದಿದ್ದಾರೆ. ಮನ್ಸೂರ್ ಅಲಿ ಎಂ. 477 ಮತಗಳು, ಟಿ.ಜಬೀನ ಅಪ 335 ಮತ್ತು ಕೆ.ಎಚ್.ಮಹಬೂಬ್ 225 ಮತಗಳನ್ನು ಪಡೆದು ಮೂರಂಕಿಯ ಮತ ಪಡೆದವರು ಎನಿಸಿಕೊಂಡರು.
ಉಳಿದ 8 ಮಂದಿ ಅಭ್ಯರ್ಥಿಗಳು ಕೇವಲ ಎರಡಂಕಿ ಮತಗಳನ್ನು ಪಡೆಯುವಲ್ಲಿ ತೃಪ್ತರಾಗಿದ್ದಾರೆ. ಅವರು ಪಡೆದ ಒಟ್ಟು ಮತಗಳು 570 ಆಗಿದೆ. ಆದರೆ, ನೋಟಾಗೆ 511 ಮತಗಳು ಚಲಾವಣೆಯಾಗಿವೆ.
ಅಲ್ಪ ಸಂಖ್ಯಾತ ಮತಗಳು ಕ್ಷೇತ್ರದಲ್ಲಿ ಸಾಕಷ್ಟಿದ್ದರೂ, ಕಾಂಗ್ರೆಸ್‌ನ ಹೊರತಾಗಿ ಬೇರೆ ಪಕ್ಷದ ಕಡೆ ಹೆಚ್ಚು ವಾಲಿದಂತೆ ತೋರುತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿ ಒಟ್ಟಾರೆ ಸುಮಾರು 22,800 ಮತಗಳು ದೊರೆತಂತಾಗಿದೆ.
ಒಟ್ಟಾರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಚಿವ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಚುನಾವಣಾ ತಂತ್ರಗಾರಿಕೆಯ ಮುಂದೆ ಅಲ್ಪಸಂಖ್ಯಾತರ ಆಟ ನಡೆಯಲಿಲ್ಲ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
