Homeಇದೀಗ ಬಂದ ಸುದ್ದಿರಾಜಕಾಲುವೆಯಲ್ಲಿ ಮಹಿಳೆ ಶವ ಪತ್ತೆ, ಕೊಲೆ ಶಂಕೆ

ರಾಜಕಾಲುವೆಯಲ್ಲಿ ಮಹಿಳೆ ಶವ ಪತ್ತೆ, ಕೊಲೆ ಶಂಕೆ

ಬೆಂಗಳೂರು,ಅ.14- ರಾಜಕಾಲುವೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಹಿಳೆಯ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.ಸುಮಾರು 35 ರಿಂದ 40 ವರ್ಷದಂತೆ ಕಾಣುವ ಈ ಮಹಿಳೆ ನೀಲಿ ಬಣ್ಣದ ಟೀ-ಶರ್ಟ್‌ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಮಾಗಡಿ ರಸ್ತೆ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗೋಪಾಲಪುರ ಬಳಿಯ ರಾಜ ಕಾಲುವೆಯಲ್ಲಿ ನಿನ್ನೆ ಸಂಜೆ ಮಹಿಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಜಕಾಲುವೆಯಿಂದ ಮೃತದೇಹವನ್ನು ಹೊರತಂದು ಪರಿಶೀಲನೆ ನಡೆಸಿದಾಗ ಹಣೆಯ ಮೇಲೆ ಗಾಯದ ಗುರುತುಗಳಿರುವುದು ಕಂಡು ಬಂದಿದೆ.ದುಷ್ಕರ್ಮಿಗಳು ಈ ಮಹಿಳೆಯ ಹಣೆಗೆ ಹೊಡೆದು ಕೊಲೆ ಮಾಡಿ ಶವವನ್ನು ರಾಜಕಾಲುವೆಗೆ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಮಹಿಳೆ ಯಾರು, ಸ್ಥಳೀಯ ನಿವಾಸಿಯೇ ಅಥವಾ ಬೇರೆ ಏರಿಯಾದವರೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ರಾಜಕಾಲುವೆ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ.ಈ ಮಹಿಳೆ ಯಾರು ಎಂಬುವುದು ಗೊತ್ತಾದರೆ ಕೊಲೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

RELATED ARTICLES
spot_img

Latest News