ಬೆಂಗಳೂರು,ಅ.5- ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿ ಸೊರಗಿ ನಿಂತಿರುವ ಬಿಜೆಪಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸೂಕ್ತ ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ರಾಜ್ಯದಲ್ಲಿ ಯಾರು ಶಕ್ತಿ ತುಂಬ ಬಲ್ಲವರು ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಅವರಿಗೆ ಬಿಜೆಪಿಯ ಸಾರಥ್ಯ ನೀಡಿದ್ದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಪುಟಿದೇಳಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸದ್ಯ ರಾಜ್ಯ ಬಿಜೆಪಿಯಲ್ಲಿ ಎದ್ದು ಕಾಣುತ್ತಿರು ವುದು ವಿರೋಧ ಪಕ್ಷದ ನಾಯಕನ ಕೊರತೆ. ಹೊಸ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ವಿರೋಧ ಪಕ್ಷದ ನಾಯಕ ಇಲ್ಲದೆ ವಿಧಾನಸಭೆ ಅವೇಶನ ನಡೆಯುವ ಮೂಲಕ ಬಿಜೆಪಿಗೆ ಮುಜುಗರ ಸನ್ನಿವೇಶವೂ ಉಂಟಾಗಿತ್ತು.
ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿವೆ. ಎರಡು ಪಕ್ಷಗಳ ಮೈತ್ರಿಯ ಲಾಭವನ್ನು ಲೋಕಸಭೆ ಚುನಾವಣೆಯಲ್ಲಿ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಮೈತ್ರಿ ಬಗ್ಗೆ ಎರಡು ಪಕ್ಷಗಳಲ್ಲಿ ಅಸಮಾಧಾನವೂ ಇದೆ. ಮೈತ್ರಿಯಿಂದ ಬಿಜೆಪಿಯ ನಾಯಕತ್ವ ಸೊರಗಲಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಎದ್ದು ನಿಲ್ಲಿಸುವ ನಿಟ್ಟಿನಲ್ಲಿ ಸೂಕ್ತ ನಾಯಕತ್ವದ ಹುಡುಕಾಟ ನಡೆಯುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಬಿ.ವೈ.ವಿಜಯೇಂದ್ರ ಹೆಸರೂ ಮುನ್ನಲೆಗೆ ಬರುತ್ತಿದೆ.
ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ
ಪುತ್ರನನ್ನು ಮುನ್ನಲೆಗೆ ತರಲು ಬಿಎಸ್‍ವೈ ಕಸರತ್ತು: ತನ್ನ ಕ್ಷೇತ್ರ ತ್ಯಾಗ ಮಾಡಿ, ಪುತ್ರನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ ಬಿಎಸ್‍ವೈ ಇದೀಗ ಪುತ್ರನಿಗೆ ಬಿಜೆಪಿಯ ನಾಯಕತ್ವ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಮಟ್ಟದಲ್ಲೂ ಅವರು ಲಾಬಿ ನಡೆಸುತ್ತಿದ್ದಾರೆ. ಸದ್ಯ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ವಿಜಯೇಂದ್ರಗೆ ಆ ಪಟ್ಟ ಕೊಡುವ ಬಗ್ಗೆಯೂ ಬಿಎಸ್‍ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಶಾಸಕರು ಹಾಗೂ ಮಾಜಿ ಶಾಸಕರು ಈ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.
ಲಿಂಗಾಯತ ಸಮುದಾಯವನ್ನು ಪೂರ್ಣ ಪ್ರಮಾಣವಾಗಿ ಸೆಳೆಯುವ ನಿಟ್ಟಿನಲ್ಲಿ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆ ಒಂದು ಕಡೆಗಿದೆ. ಹೀಗಾದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬೇರೆ ಸಮುದಾಯಕ್ಕೆ ನೀಡಬೇಕಾಗಿದೆ.
ವಿಜಯೇಂದ್ರಗೆ ಅವರ ತಂದೆ ಯಡಿಯೂರಪ್ಪ ಅವರೇ ದೊಡ್ಡ ಶಕ್ತಿ. ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಅಧಿಕಾರಕ್ಕೆ ತಂದ ಕೀರ್ತಿ ಅವರದ್ದು. ಬಿಎಸ್ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ರಾಗಿದ್ದವರು. ಇದೀಗ ಪುತ್ರನಿಗೆ ರಾಜಕೀಯ ಶಕ್ತಿ ತುಂಬಲು ಸ್ವತಃ ಯಡಿಯೂರಪ್ಪ ಅವರು ಪ್ರಯತ್ನ ಮಾಡುತ್ತಿದ್ದಾರೆ. ಬಿಎಸ್ವೈ ಮಾರ್ಗದರ್ಶನ ವಿಜಯೇಂದ್ರಗೆ ದೊಡ್ಡ ಶಕ್ತಿಯಾಗಿದೆ.
ಬಿಎಸ್‍ವೈ ಬಳಿಕ ಲಿಂಗಾಯತ ಸಮುದಾಯದ ಪ್ರಬಲ ಬೆಂಬಲ ಅವರ ಪುತ್ರ ವಿಜಯೇಂದ್ರ ಸಿಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ಉತ್ತಮ ಮಾತುಗಾರಿಕೆಯೂ ಇವರಲ್ಲಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಬಿಜೆಪಿಯ ಬಹುತೇಕ ಶಾಸಕರು ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಕ್ಕೆ ಅಭ್ಯಂತರ ಇಲ್ಲದಂತಹ ವಾತಾವರಣವಿದೆ.
ವಿಜಯೇಂದ್ರ ಅವರು ಹೈಕಮಾಂಡ್ ಜೊತೆಗೂ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯೇಂದ್ರ ಬೆನ್ನು ತಟ್ಟಿದ ಫೋಟೋ ಈ ಸಂದೇಶವನ್ನು ರವಾನೆ ಮಾಡಿತ್ತು. ಇದು ಕೂಡವಿಜಯೇಂದ್ರ ಪಾಲಿಗೆ ಸಕರಾತ್ಮಕವಾಗಿ ಪರಿಣಮಿಸಬಹುದು.
ಸ್ವಪಕ್ಷೀಯರಿಂದಲೇ ಆರೋಪ: ಬಿಎಸ್ ಯಡಿಯೂರಪ್ಪ ಅವರು ಅಧಿಕಾರಲ್ಲಿದ್ದಾಗ ವಿಜಯೇಂದ್ರ ವಿರುದ್ಧ ಅವರ ಪಕ್ಷದ ಕೆಲವು ಶಾಸಕರೇ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಅದರಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಭ್ರಷ್ಟಾಚಾರದ ಆರೋಪವನ್ನು ವಿಜಯೇಂದ್ರ ವಿರುದ್ಧ ಮಾಡಿದ್ದರು. ಹಾಗಿದ್ದರೂ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಜರಗಿರಲಿಲ್ಲ.
ಸಿಕ್ಕಿಂ ಮೇಘಸ್ಪೋಟ : 14 ಜನ ಸಾವು, 102 ಮಂದಿ ನಾಪತ್ತೆ
ಇನ್ನು ವಿಜಯೇಂದ್ರ ಅವರಿಗೆ ರಾಜಕೀಯ ಕುಟುಂಬ ಹಿನ್ನೆಲೆ ಇದ್ದರೂ, ವೈಯಕ್ತಿಕವಾಗಿ ಅವರು ಪಳಗಿಲ್ಲ ಎಂಬ ಅಭಿಪ್ರಾಯವೂ ಇದೆ. ಮೊದಲ ಬಾರಿ ಶಾಸಕರಾಗಿರುವ ಅವರು ರಾಜಕೀಯದಲ್ಲಿ ಮತ್ತಷ್ಟು ಪಳಗಬೇಕು. ಹಿರಿತನ ಗಳಿಸಬೇಕು, ಬಳಿಕ ಅವರಿಗೆ ನಾಯಕತ್ವ ನೀಡಬೇಕು ಎಂಬ ವಾದವೂ ಪಕ್ಷದಲ್ಲಿ ಕೇಳಿಬರುತ್ತಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಕಾರಣರಾದ ಕೆಲವು ಹೈಕಮಾಂಡ್ ನಾಯಕರು ವಿಜಯೇಂದ್ರ ಅವರ ಪಾಲಿಗೂ ವಿಲನ್‍ಗಳಾಗಿದ್ದಾರೆ ಎಂಬ ಅಭಿಪ್ರಾಯ ಬಿಜೆಪಿಯಲ್ಲಿದೆ. ಕುಟುಂಬ ರಾಜಕಾರಣದ ವಿರುದ್ಧವಾಗಿ ಮಾತನಾಡುವ ಕೆಲವು ನಾಯಕರು ವಿಜಯೇಂದ್ರ ನಾಯಕತ್ವ ವನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ.