Wednesday, February 28, 2024
Homeರಾಜ್ಯನಾಳೆ ಅಶೋಕ್, ವಿಜಯೇಂದ್ರ ದೆಹಲಿಗೆ

ನಾಳೆ ಅಶೋಕ್, ವಿಜಯೇಂದ್ರ ದೆಹಲಿಗೆ

ಬೆಂಗಳೂರು,ನ.30- ನೂತನ ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನಾಳೆ ದೆಹಲಿಗೆ ತೆರಳಲಿದ್ದು, ಪಕ್ಷದ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಜಯೇಂದ್ರ ಅವರ ಮೊದಲ ದೆಹಲಿ ಭೇಟಿ ಇದಾಗಿದೆ.

ಅಲ್ಲದೆ ಅಶೋಕ್ ಕೂಡ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಪಕ್ಷದ ಹಿರಿಯರನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲು. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವರನ್ನು ಭೇಟಿಯಾಗಿ ಪಕ್ಷದ ಬೆಳವಣಿಗೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ತಮ್ಮನ್ನು ಅತ್ಯಂತ ಜವಾಬ್ದಾರಿಯುತ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಲು ವಿಜಯೇಂದ್ರ ದೆಹಲಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಅಶೋಕ್ ಕೂಡ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದರಿಂದ ತಮ್ಮ ಮೇಲೆ ವಿಶ್ವಾಸವಿಟ್ಟು ಮಹತ್ವದ ಜವಾಬ್ದಾರಿಯನ್ನು ನೀಡಿರುವ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

ಮೊಬೈಲ್‍ ಬಳಕೆ ವಿಚಾರಕ್ಕೆ ರೊಚ್ಚಿಗೆದ್ದು ಮಗನನ್ನೇ ಕೊಂದ ಅಪ್ಪ

ದೆಹಲಿಯ ಭೇಟಿ ಸಂದರ್ಭದಲ್ಲಿ ವಿಜಯೇಂದ್ರ ಮತ್ತು ಅಶೋಕ್, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಹಾಗೂ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ, ಉಪನಾಯಕ, ಮುಖ್ಯ ಸಚೇತಕರು, ಸೇರಿದಂತೆ ಪ್ರಮುಖ ಹುದ್ದೆಗಳ ಬಗ್ಗೆ ನೇಮಕ ಮಾಡುವ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಿರುವ ಹಿನ್ನಲೆಯಲ್ಲಿ ವಿಜಯೇಂದ್ರ ಪಕ್ಷಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆಯೂ ಸಲಹೆಯನ್ನು ಪಡೆಯಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ನಳೀನ್‍ಕುಮಾರ್ ಅಧಿಕಾರ ಅವಧಿಯಲ್ಲಿ ನೇಮಕವಾಗಿದ್ದ ಪದಾಕಾರಿಗಳನ್ನು ಬದಲಾಯಿಸಿ ಸೇವಾ ಹಿರಿತನ, ಪ್ರದೇಶವಾರು, ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಎಲ್ಲ ಸಮುದಾಯಗಳನ್ನು ಒಳಗೊಂಡ ಸಮನ್ವಯ ಸಾಸುವ ಪದಾಕಾರಿಗಳ ನೇಮಕಾತಿಗೆ ಒಲವು ತೋರಿದ್ದಾರೆ.

ಮೂಲ, ವಲಸಿಗ, ಆರ್‍ಎಸ್‍ಎಸ್, ಸಂಘ ಪರಿವಾರ ಎನ್ನದೆ ಪಕ್ಷ ನಿಷ್ಠರಿಗೆ ಮಾತ್ರ ಪಟ್ಟಿಯಲ್ಲಿ ಮಣೆ ಹಾಕಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸುವ ಲೆಕ್ಕಾಚಾರದಲ್ಲಿ ವಿಜಯೇಂದ್ರ ಇದ್ದಾರೆ. ಆ ಬಣ, ಈ ಬಣ ಎನ್ನದೆ ಬಿಜೆಪಿಯೇ ಮೂಲ ಬಣ ಎಂಬುದಕ್ಕೆ ಒತ್ತು ಕೊಟ್ಟಿರುವ ವಿಜೇಂದ್ರ ಯಾರಿಗೂ ಅಸಮಾಧಾನವಾಗದಂತೆ ಎಲ್ಲರನ್ನು ಸಮಾಧಾನಪಡಿಸುವ ಸಮತೋಲನ ಕಾಪಾಡುವ ಪಟ್ಟಿಯನ್ನು ಸಿದ್ದಪಡಿಸುವ ಲೆಕ್ಕಾಚಾರದಲ್ಲಿದ್ದಾರೆ.

ಇನ್ನು ಬರಲಿರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸುವುದು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಕ್ಷೇತ್ರಗಳ ಹಂಚಿಕೆ, ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ರೂಪಿಸುವುದು ಸೇರಿದಂತೆ ಹಲವಾರು ಕಾರ್ಯತಂತ್ರಗಳ ಬಗ್ಗೆಯೂ ಹಿರಿಯ ನಾಯಕರಿಂದ ಸಲಹೆಗಳನ್ನು ಪಡೆದುಕೊಳ್ಳಲಿದ್ದಾರೆ.

ತೆಲಂಗಾಣ ಚುನಾವಣೆ : ಮತ ಚಲಾಯಿಸಿದ ಸ್ಟಾರ್ ನಟರು

ವಿಜಯೇಂದ್ರ ಮತ್ತು ಅಶೋಕ್ ನೇಮಕಾತಿಗೆ ಮಾಜಿ ಸಚಿವರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಶಾಸಕ ಅರವಿಂದ ಬೆಲ್ಲದ್ ಮತ್ತಿತರರು ಅಪಸ್ವರ ತೆಗೆದಿದ್ದಾರೆ. ಭಿನ್ನಮತೀಯ ಬಣ ಡಿ.7ರಂದು ನವದೆಹಲಿಗೆ ತೆರಳುತ್ತಿದ್ದು, ವರಿಷ್ಠರಿಗೆ ದೂರು ನೀಡಲಿದ್ದಾರೆ. ಇದಕ್ಕೂ ಮುನ್ನವೇ ದೆಹಲಿಗೆ ತೆರಳುತ್ತಿರುವ ವಿಜಯೇಂದ್ರ ಮತ್ತು ಅಶೋಕ್ ಪಕ್ಷದೊಳಗೆ ವರಿಷ್ಠರ ತೀರ್ಮಾನವನ್ನು ಯಾರೊಬ್ಬರು ಪ್ರಶ್ನೆ ಮಾಡದಂತೆ ಸೂಚನೆ ನೀಡಬೇಕೆಂದು ಮನವಿ ಮಾಡುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆಗೂ ಮುನ್ನವೇ ಕೆಲವರು ಈ ರೀತಿ ತಮ್ಮ ಬಾಯಿಯನ್ನು ಸಡಿಲ ಮಾಡಿದ್ದರಿಂದಲೇ ನಮಗೆ ಒಡೆತ ಬಿದ್ದಿತ್ತು ಪುನಃ ಇದು ಪುನರಾವರ್ತನೆಯಾದರೆ ಮತ್ತೆ ಹಿನ್ನಡೆಯಾಗಲಿದೆ. ಭಿನ್ನಮತೀಯರ ಬಾಯಿಗೆ ಕಡಿವಾಣ ಹಾಕುವಂತೆ ದೂರು ನೀಡುವ ಸಾಧ್ಯತೆ ಇದೆ.

RELATED ARTICLES

Latest News