Wednesday, May 1, 2024
Homeರಾಜ್ಯಬಿಜೆಪಿ ನಾಯಕರ ಕುರಿತು ಪರಮೇಶ್ವರ್ ಲೇವಡಿ

ಬಿಜೆಪಿ ನಾಯಕರ ಕುರಿತು ಪರಮೇಶ್ವರ್ ಲೇವಡಿ

ಬೆಂಗಳೂರು,ಫೆ.3- ಬರಬಾಧಿತ ತಾಲೂಕುಗಳಿಗೆ ಆರ್ಥಿಕ ನೆರವು ನೀಡದೇ ಇರುವ ಕೇಂದ್ರಸರ್ಕಾರದ ವಿರುದ್ಧ ಧ್ವನಿ ಎತ್ತದೇ ಇರುವ ಬಿಜೆಪಿ ನಾಯಕರು, ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರೆ ಇದ್ಯಾವ ನೈತಿಕತೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಬಿಡುಗಡೆ ಮಾಡಿಸಬೇಕಾದವರೆ ಪ್ರತಿಭಟನೆ ನಡೆಸುತ್ತಾರೆ ಎಂದರೆ ಇದನ್ನು ಏನೆಂದು ಹೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಮುಖ್ಯಮಂತ್ರಿಯವರು ಪ್ರಧಾನಮಂತ್ರಿ ಕೇಂದ್ರ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. 14 ಕ್ಕೂ ಹೆಚ್ಚು ಬಾರಿ ಪತ್ರ ಬರೆದಿದ್ದಾರೆ.

ನಮ್ಮ ಸಂಪುಟದ ಹಲವು ಸಚಿವರು ಹಲವು ಬಾರಿ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಬಹಳಷ್ಟು ವೇಳೆ ಕೇಂದ್ರ ಸಚಿವರು ರಾಜ್ಯಸಚಿವರ ಭೇಟಿಗೆ ಸಮಯವನ್ನೇ ನೀಡದೇ ಸತಾಯಿಸಿರುವ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ನಮಗೆ ದೆಹಲಿಯಲ್ಲಿ ಪ್ರತಿಭಟನೆ ಮಾಡುವುದನ್ನು ಹೊರತುಪಡಿಸಿ ನಮಗೆ ಬೇರೆ ಯಾವ ಆಯ್ಕೆಗಳಿವೆ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಕೇಂದ್ರದ ನೆರವು ಕಾಯದೆ ಹಣ ಬಿಡುಗಡೆ ಮಾಡುತ್ತಿದ್ದುದಾಗಿ ಆರ್.ಅಶೋಕ್ ಸೇರಿದಂತೆ ಅನೇಕ ನಾಯಕರು ಹೇಳಿಕೊಂಡಿದ್ದಾರೆ. ನಾವೂ ಕೂಡ ಈಗಾಗಲೇ ಮೊದಲ ಕಂತಿನ 2 ಸಾವಿರ ರೂ.ಗಳನ್ನು ರೈತರಿಗೆ ಬಿಡುಗಡೆ ಮಾಡಿದ್ದೇವೆ. ಇದಕ್ಕಾಗಿ 650 ಕೋಟಿ ರೂ.ಗಳು ಖರ್ಚಾಗಿದೆ. ಜೊತೆಗೆ ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗೆ 540 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈಗಲಾದರೂ ಕೇಂದ್ರಸರ್ಕಾರ ಹಣ ನೀಡಬೇಕಲ್ಲವೇ ಎಂದು ಹೇಳಿದರು.

ತಾಜ್‍ಮಹಲ್‍ನಲ್ಲಿ ಉರುಸ್ ಆಚರಣೆ ಪ್ರಶ್ನಿಸಿದ ಹಿಂದೂ ಮಹಾಸಭಾ

ರಾಜ್ಯದ 223 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಇದಕ್ಕಾಗಿ ವಿಶೇಷ ಅನುದಾನ ನೀಡಬೇಕಿತ್ತು. ಆದರೆ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಇನ್ನು ಎನ್‍ಡಿಆರ್‍ಎಫ್ ಪ್ರತಿ ವರ್ಷ ಯಾಂತ್ರಿಕವಾಗಿ ಬಿಡುಗಡೆಯಾಗುವ ಅನುದಾನವೂ ಇಲ್ಲ. ತೆರಿಗೆ ಸಂಗ್ರಹದಲ್ಲಿ ಎರಡನೇ ಅತೀ ದೊಡ್ಡ ರಾಜ್ಯವಾಗಿರುವ ಕರ್ನಾಟಕಕ್ಕೆ ಕೇಂದ್ರದಿಂದ ದೊರೆಯುವ ಅನುದಾನದಲ್ಲೂ ಕಡಿತವಾಗಿದೆ. ಇವುಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿಯವರೇ ಪ್ರತಿಭಟನೆ ಮಾಡುತ್ತೇವೆ ಎಂದರೆ ಇದಕ್ಕೆ ಏನು ಹೇಳಬೇಕು ಎಂದರು.

ರಾಜ್ಯಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದರೆ ರೈತರಿಗೆ 2 ಸಾವಿರ ರೂ. ನೀಡುತ್ತಿರಲಿಲ್ಲ, ಬರ ನಿರ್ವಹಣೆಗೆ ಹಣ ಒದಗಿಸುತ್ತಿರಲಿಲ್ಲ. ರಾಜಕೀಯವಾಗಿ ಹೇಳಿಕೆಗಳನ್ನು ನೀಡಿ ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಶೀಘ್ರವೇ ಪ್ರಕಟಿಸಲಾಗುವುದು. ಈಗಾಗಲೇ ಹಲವು ಸುತ್ತಿನ ಸಮಾಲೋಚನೆಗಳಾಗಿವೆ. ಫೆ.7 ರಂದು ದೆಹಲಿಗೆ ತೆರಳಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗದ ಬಾಗೂರಿನ ಮುಜರಾಯಿ ದೇವಸ್ಥಾನದಲ್ಲಿ ಕನಕಗುರು ಪೀಠದ ಸ್ವಾಮೀಜಿಗಳಿಗೆ ತಾರತಮ್ಯ ಮಾಡಿದ ಬಗ್ಗೆ ಸಂಬಂಧಪಟ್ಟವರೇ ಕ್ರಮ ಕೈಗೊಳ್ಳುತ್ತಾರೆ. ಇದು ಪೊಲೀಸ್ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲ. ಒಂದು ವೇಳೆ ಪರಿಸ್ಥಿತಿ ಮುಂದುವರೆದು ಬೇರೆ ಹಂತಕ್ಕೆ ತಲುಪಿದರೆ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಆಗ ಪೊಲೀಸರು ಸಾಮಾಜಿಕ ಸಮಸ್ಯೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುತ್ತಾರೆ. ಸದ್ಯಕ್ಕೆ ಈ ವಿಷಯದಲ್ಲಿ ಪೊಲೀಸರ ಪಾತ್ರ ಇಲ್ಲ ಎಂದರು.

RELATED ARTICLES

Latest News