ದೊಡ್ಡಬಳ್ಳಾಪುರ,ಜ.30- ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್ ಬಳಸಿ ತಯಾರಿಸಿದ್ದಾರೆಂದು ಶಂಕಿಸಲಾಗಿರುವ ವಿಮಾನ ಮಾದರಿಯ ಸುಮಾರು ಏಳು ಅಡಿ ಉದ್ದ ನಾಲ್ಕು ಅಡಿ ಅಗಲದ ಡ್ರೋನ್ ಒಂದು ನಗರದ ಹೊರವಲಯದ ಪಾಲನಜೋಗಹಳ್ಳಿಯ 10ನೇ ಕ್ರಾಸ್ ಬಳಿ ಮನೆಯೊಂದರ ಬಾಗಿಲ ಮುಂದೆ ಬಿದ್ದಿರುವುದು ಕಂಡು ಬಂದಿದೆ.
ನಿನ್ನೆ ಸುಮಾರು 3.30 ರ ಸುಮಾರಿಗೆ ಹಾರುತ್ತಾ ಬಂದ ವಿಮಾನ ಮಾದರಿಯ ವಸ್ತು ಏಕಾಏಕಿ ನೆಲಕ್ಕೆ ಬಿದ್ದುದನ್ನು ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಡ್ರೋನ್ ಅನ್ನು ವಶಕ್ಕೆ ಪಡೆದರು.
ಎಸ್ .ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ,ಸೋಕೊ ಟೀಂ ಸೇರಿದಂತೆ ಎಲ್ಲ ತಜ್ಞರ ತಂಡ ಆಗಮಿಸಿ ಹಲವು ಗಂಟೆಗಳ ಕಾಲ ಡ್ರೋನ್ ಮಾದರಿಯ ವಸ್ತುವನ್ನ ಪರಿಶೀಲನೆ ನಡೆಸಿದ್ದು, ಥರ್ಮಕೋಲ್ ಬಳಸಿ ವಿಮಾನ ಮಾದರಿಯಲ್ಲಿ ತಯಾರಿಸಲಾಗಿದೆ, ಬ್ಯಾಟರಿ ಸೇರಿದಂತೆ ಎಲೆಕ್ಟ್ರಿಕ್ ವೈರ್‌ಗಳು ಅಳವಡಿಸಲಾಗಿದ್ದವು ಎನ್ನಲಾಗಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿ ಪರೀಕ್ಷಾರ್ಥವಾಗಿ ಹಾರಿಸಿದ ವೇಳೆ ಸಂಪರ್ಕ ಕಡಿತಗೊಂಡು ಡ್ರೋನ್ ಬಿದ್ದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರೋನ್ ಯಾರಿಂದ, ಯಾವ ಉದ್ದೇಶಕ್ಕಾಗಿ ಹಾರಿಸಲಾಗಿತ್ತು ಎಂಬ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ಮುಂದುವರಿದಿದೆ.ಅಲ್ಲದೆ ಆ ವಸ್ತುವನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಸಾರ್ವಜನಿಕರು ಅಧಿಕೃತವಲ್ಲದ ಸುದ್ದಿಗಳಿಗೆ ಕಿವಿಗೊಟ್ಟು ಆತಂಕ ಮತ್ತು ಗೊಂದಲಕ್ಕೆ ಒಳಗಾಗದೆ, ಅಧಿಕತ ಮಾಹಿತಿಯನ್ನಷ್ಟೇ ನಂಬುವಂತೆ ಪೊಲೀಸರು ಮನವಿ ಮಾಡಿದ್ದಾರೆ.
