ಹಾಸನ,ಜ.17– ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆಯನ್ನು ಬಲಿ ಪಡೆದಿದ್ದ ಕಿಲ್ಲರ್ ಒಂಟಿಸಲಗವನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಾರ್ಮಿಕ ಮಹಿಳೆ ಶೋಭಾ ಮೇಲೆ ದಾಳಿ ನಡೆಸಿ ಪ್ರಾಣಹರಣ ಮಾಡಿದ ಕಾಡಾನೆಯ ಸೆರೆಗಾಗಿ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾಕಾನೆಗಳ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಂಡು ಸತತ 3 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗಿದೆ.
ಈ ಕಾರ್ಯಾಚರಣೆಗೆ ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರದಿಂದ ಐದು ತರಬೇತಿ ಪಡೆದ ಸಾಕಾನೆಗಳನ್ನು ಬೈರಾಪುರಕ್ಕೆ ಕರೆತಂದಿದ್ದ ಸುಗ್ರೀವ, ಧನಂಜಯ, ಲಕ್ಷ್ಮಣ, ಅಯ್ಯಪ್ಪ ಹಾಗೂ ಹರ್ಷ ಎಂಬ ಸಾಕಾನೆಗಳು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಕಿಲ್ಲರ್ ಒಂಟಿಸಲಗ ಬಿಕ್ಕೋಡು ಭಾಗದಲ್ಲಿ ಸಂಚರಿಸುತ್ತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ತಂಡಗಳು ಕಾಡಾನೆ ಚಲನವಲನವನ್ನು ನಿಖರವಾಗಿ ಟ್ರ್ಯಾಕ್ ಮಾಡಿ ಡ್ರೋನ್‌ಗಳು, ಟ್ರ್ಯಾಕಿಂಗ್ ಸಾಧನಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.
ಬೇಲೂರು ತಾಲೂಕಿನ ಚಂದಾಪುರದ ಅರಣ್ಯ ಪ್ರದೇಶದ ಬಳಿ ಕಾಡಾನೆ ಪತ್ತೆಯಾಗಿತ್ತು. ಸಾಕಾನೆಗಳ ನೆರವಿನೊಂದಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಆದರೂ ನಿತ್ರಾಣಗೊಳ್ಳದ ಕಾಡಾನೆ ಸುಮಾರು 12 ಕಿಲೋ ಮೀಟರ್ ಸುತ್ತಾಡಿ ಕೊನೆಗೆ ಕಾಫಿ ತೋಟವೊಂದರಲ್ಲಿ ಕುಸಿದುಬಿದ್ದಿದ್ದು, ಮಧ್ಯಾಹ್ನ 3.45 ಕ್ಕೆ ಪ್ರಾರಂಭವಾದ ಕಾರ್ಯಾಚರಣೆ ಸಂಜೆ 6.45 ವರೆಗೂ ನಡೆದು ಅಂತಿಮವಾಗಿ ಕಾಡಾನೆಯನ್ನು ಸೆರೆ ಹಿಡಿಯಲಾಯಿತು. ನಂತರ ಆನೆಗೆ ಆರೈಕೆ ಮಾಡಿ ಎಚ್ಚರಗೊಂಡ ನಂತರ ಸಾಕಾನೆಗಳು ಸೆರೆಯಾದ ಕಾಡಾನೆಯನ್ನು ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
