ಹಾಸನ, ಮೇ 9-ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಲಿವೆ ಎಂಬ ಸುದ್ದಿಗಳು ಕೇವಲ ಊಹಾಪೋಹಗಳಾಗಿದ್ದು, ನನ್ನ ರಾಜಕೀಯ ಅನುಭವದಲ್ಲಿ ಅಂಥ ಸಾಧ್ಯತೆ ಕಾಣುವುದಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಪಡೆದು ಸ್ಪಷ್ಟ ಬಹುಮತದ ಸಂಖ್ಯೆಯನ್ನು ಪರಿಗಣಿಸಲಿದ್ದಾರೆ ಎಂದಿದ್ದಾರೆ.
ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ನಡೆ ಕುರಿತು ಟೀಕೆ ಮಾಡುವ ಅಗತ್ಯವಿಲ್ಲ. ಯಾವ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಗಳನ್ನು ಅಸ್ಥಿರಗೊಳಿಸಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕೇಂದ್ರದಲ್ಲಿ ಚರಣ್‌ಸಿಂಗ್, ವಿ.ಪಿ.ಸಿಂಗ್, ಚಂದ್ರಶೇಖರ್ ಸರ್ಕಾರಗಳ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳೇ ಸಾಕು. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಯಾವ ಕಾರಣಗಳನ್ನು ನೀಡಿ ಸರ್ಕಾರ ಕೆಡವಿದರು ಎಂಬುದು ದೇಶಕ್ಕೆ ಗೊತ್ತಿದೆ ಎಂದು ಹೇಳಿದ್ದಾರೆ.
ಇಪ್ಪತ್ತು ವರ್ಷಗಳ ಕಾಲ ಡಿಎಂಕೆ ಜೊತೆ ಇದ್ದವರು ಈಗ ವಿಜಯ್ ಜೊತೆ ಸೇರಿದ್ದಾರೆ. ಅವರ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ತೀರ್ಮಾನ ಮಾಡಿರಬಹುದು. ಅದರ ಬಗ್ಗೆ ಕಾಲವೇ ಉತ್ತರ ನೀಡಲಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ರಾಜಕಾರಣದಲ್ಲಿ ಸಿನಿಮಾದ ಪ್ರಭಾವ ಬಹಳ ಹಿಂದಿನಿಂದಲೂ ಇದೆ. ಈಗಲೂ ಅದೇ ಪ್ರಭಾವ ಕಾಣಿಸಿದೆ. ಹೊಸ ಮುಖಕ್ಕೆ ಅಧಿಕಾರ ನೀಡಬೇಕು ಎಂಬ ಮನೋಭಾವದಿಂದ ಜನ ತೀರ್ಮಾನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಘೋಷಿಸಲಾಗುತ್ತಿರುವ ಉಚಿತ ಗ್ಯಾರಂಟಿಗಳ ಕುರಿತು ಪ್ರಶ್ನಿಸಿದಾಗ, ಅವರ ಬಜೆಟ್ ವರ್ಷಕ್ಕೆ 3.40 ಲಕ್ಷ ಕೋಟಿ ರೂ.ಇದೆ. ಆದರೆ ಘೋಷಿಸಿರುವ ಉಚಿತ ಯೋಜನೆಗಳಿಗೆ 6ರಿಂದ 7 ಲಕ್ಷ ಕೋಟಿ ಬೇಕಾಗಬಹುದು. ಆ ಮಟ್ಟದ ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ದೇವರೇ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ಓಟ್ ಚೋರಿ ಚರ್ಚೆಗೆ ಅರ್ಥವಿಲ್ಲ: ಶೃಂಗೇರಿ ಕ್ಷೇತ್ರ ಮರುಎಣಿಕೆ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಮಾಜಿ ಶಾಸಕ ರಾಜೇಗೌಡರು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕು. ಈಗಿನ ಪರಿಸ್ಥಿತಿಯಲ್ಲಿ ಓಟ್ ಚೋರಿ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಯಾವುದೇ ಅರ್ಥವಿಲ್ಲ. ಆ ವಿಷಯದಲ್ಲಿ ಚರ್ಚೆ ಮಾಡುವ ನೈತಿಕತೆಯೂ ಕೆಲವರಿಗೆ ಇಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಕಾರ್ಯಕ್ರಮಕ್ಕೆ ಗೈರು: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದ ಕುರಿತ ಮಾತನಾಡಿದ ಅವರು, ಯಡಿಯೂರಪ್ಪ ಅವರ ಐವತ್ತು ವರ್ಷದ ರಾಜಕೀಯ ಸಾಧನೆ ಮತ್ತು ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ಸರಿಸಿ ಬಿಜೆಪಿ ಕಾರ್ಯಕ್ರಮ ಆಯೋಜಿಸಿದೆ. ಆದರೆ, ನನಗೆ ಬೇರೆ ಕಾರ್ಯಕ್ರಮ ಇರುವುದರಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಶಾಸಕ ಸ್ವರೂಪ್ ಪ್ರಕಾಶ್ ಹಾಜರಿದ್ದರು.
