ಬೆಂಗಳೂರು,ಜ.17- ಒಂಟಿಯಾಗಿ ಓಡಾಡುತ್ತಿದ್ದ ಎರಡು ವರ್ಷದ ಮಗುವನ್ನು ಹೊಯ್ಸಳ ಪೊಲೀಸರು ಹಾಗೂ ಸಿಎಫ್‌ಎಸ್ ತಂಡ ರಕ್ಷಿಸಿ ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಜ.14 ರಂದು ಬೆಳಗ್ಗೆ 10.50 ರ ಸುಮಾರಿನಲ್ಲಿ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಿಗುಪ್ಪೆ ಹೊಸಕೆರೇಹಳ್ಳಿ ಫ್ಲೈಓವರ್ ಸಮೀಪದ ರಸ್ತೆಯಲ್ಲಿ ಎರಡು ವರ್ಷದ ಮಗು ಒಂಟಿಯಾಗಿ ಹೋಗುತ್ತಿತ್ತು.
ಮಗುವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ತುರ್ತು ಸಹಾಯವಾಣಿ ನಮ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ನಮ 112 ಸಿಬ್ಬಂದಿಯವರು ಗಿರಿನಗರ ಪೊಲೀಸ್ ಠಾಣೆಯ ಹೊಯ್ಸಳ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ ಸ್ಟೇಬಲ್ ಮಾರುತಿ ಹಾಗೂ ತಂಡದವರಿಗೆ ಮಾಹಿತಿ ರವಾನಿಸಿದ್ದಾರೆ.
ಹೊಯ್ಸಳ ಸಿಬ್ಬಂದಿ ಕೇವಲ ನಾಲ್ಕು ನಿಮಿಷದೊಳಗೆ ಸ್ಥಳಕ್ಕೆ ಹೋಗಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, ಮಗುವಿನ ಪೋಷಕರ ಬಗ್ಗೆ ಸುತ್ತಮುತ್ತ ವಿಚಾರಿಸಿದ್ದಾರೆ. ನಂತರ ಸಿಎಫ್‌ಎಸ್ ತಂಡ ಹಾಗೂ ಹೊಯ್ಸಳ ಪೊಲೀಸರ ಜಂಟಿ ಪ್ರಯತ್ನದಿಂದ ಮಗುವಿನ ಪೋಷಕರನ್ನು ಪತ್ತೆ ಮಾಡಿ ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಿದ್ದಾರೆ.
ಬೈಕ್ ಸವಾರರ ಜೀವ ಉಳಿಸಿದ ಹೊಯ್ಸಳ ಪೊಲೀಸರು
ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಇಬ್ಬರು ಬೈಕ್ ಸವಾರರನ್ನು ಹೊಯ್ಸಳ ಪೊಲೀಸರು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಜೀವ ಉಳಿಸುವಲ್ಲಿ ನೆರವಾಗಿದ್ದಾರೆ.
ಜ.15 ರಂದು ಬೆಳಗಿನ ಜಾವ 1.13 ರ ಸುಮಾರಿಗೆ ಸುಂಕದಕಟ್ಟೆಯ ಚಂದನಲೇಔಟ್ ಬಳಿಯ ಮಾಗಡಿ ರಸ್ತೆಯಲ್ಲಿ ಬೈಕ್ ಅಪಘಾತಕ್ಕೀಡಾಗಿ ಸವಾರ ಹಾಗೂ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಸಾರ್ವಜನಿಕರೊಬ್ಬರು ನಮ 112 ಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ನಮ 112 ಸಿಬ್ಬಂದಿಯವರು ಈ ಮಾಹಿತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್‌ಐ ರಾಮಕೃಷ್ಣ ಮತ್ತು ಕಾನ್‌್ಸಸ್ಪೇಬಲ್ ಕಾರ್ತಿಕ್ ಬದರಿ ಅವರಿಗೆ ರವಾನಿಸಿದ್ದಾರೆ.
ಈ ಮಾಹಿತಿ ಸ್ವೀಕರಿಸಿದ ಕೇವಲ 10 ನಿಮಿಷಗಳಲ್ಲಿ ಸ್ಥಳಕ್ಕೆ ಹೋಗಿ ಇಬ್ಬರು ಬೈಕ್ ಸವಾರರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಈ ಘಟನೆಗಳು ಬೆಂಗಳೂರು ಸೇಫ್ ಸಿಟಿ ಯೋಜನೆಯಡಿಯಲ್ಲಿ ಅಸಹಾಯಕ ಹಾಗೂ ಸಂಕಷ್ಟದಲ್ಲಿರುವ ವ್ಯಕ್ತಿಗಳ ರಕ್ಷಣೆ ಮತ್ತು ನೆರವಿನಲ್ಲಿ ಬೆಂಗಳೂರು ನಗರ ಪೊಲೀಸರ ಜಾಗೃತಿ, ಮಾನವೀಯತೆ ಹಾಗೂ ತ್ವರಿತ ಸ್ಪಂದನೆಯನ್ನು ತೋರಿಸುತ್ತದೆ.
