Sunday, May 5, 2024
Homeರಾಜಕೀಯನಾಳೆ 10 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ಈಶ್ವರಪ್ಪ ಘೋಷಣೆ

ನಾಳೆ 10 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ಈಶ್ವರಪ್ಪ ಘೋಷಣೆ

ಬೆಂಗಳೂರು,ಏ.11- ತಮ್ಮ ಪುತ್ರನಿಗೆ ಟಿಕೆಟ್ ಸಿಗದಿದ್ದರಿಂದ ಬಂಡೆದ್ದಿರುವ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ನಾಳೆ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಈಶ್ವರಪ್ಪ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಖುದ್ದು ಅವರೇ ಘೋಷಣೆ ಮಾಡಿದ್ದಾರೆ.

ಈ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ರಾಜ್ಯದಲ್ಲೇ ಅತ್ಯಂತ ಪೈಪೋಟಿ ಇರುವ ಕ್ಷೇತ್ರಗಳ ಪೈಕಿ ಒಂದಾಗಲಿದೆ. ನಾನು ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಯಾವ ಶಕ್ತಿಗಳೂ ಕೂಡ ಇದನ್ನು ತಡೆಯಲು ಸಾಧ್ಯವಿಲ್ಲ. ಬ್ರಹ್ಮ ಹೇಳಿದರೂ ಕೂಡ ನಾನು ಕಣದಿಂದ ಹಿಂದೆ ಸರಿಯುವುದಿಲ್ಲ. ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ಪುನರ್ ಉಚ್ಚರಿಸಿದರು.

ತಮ್ಮ ಮಾತಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಂಡ ಕಾರಿದ ಈಶ್ವರಪ್ಪ, ಬಿಜೆಪಿಯನ್ನು ಸ್ವಚ್ಛಗೊಳಿಸಲು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಪಕ್ಷದಲ್ಲಿ ಅಪ್ಪ-ಮಕ್ಕಳ ಆಟ ಅತಿಯಾಗಿದೆ. ನನಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಬೆಂಬಲವಿದೆ. ಗೆದ್ದು ಮಾತನಾಡುತ್ತೇನೆ ಎಂದು ಕಿಡಿಕಾರಿದರು.

ಬಿಜೆಪಿಯ ಅಭ್ಯರ್ಥಿ ರಾಘವೇಂದ್ರ ಚುನಾವಣೆಯಲ್ಲಿ ಸೋಲುವುದು ಕಟ್ಟಿಟ್ಟ ಬುತ್ತಿ. ಯಾವುದೇ ಕಾರಣಕ್ಕೂ ಅವರು ಗೆಲ್ಲುವುದಿಲ್ಲ. ನನಗೆ ಬಿಜೆಪಿಯ ನಿಷ್ಠಾವಂತರಿಂದಲೇ ದೂರವಾಣಿ ಕರೆಗಳು ಬರುತ್ತಿದ್ದು, ನಾಮಪತ್ರ ಹಿಂಪಡೆಯಬಾರದೆಂದು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದರು. ಯಡಿಯೂರಪ್ಪ ಮತ್ತು ವಿಜಯೇಂದ್ರ ವ್ಯವಸ್ಥಿತವಾಗಿ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ.

ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಅನೇಕರಿಗೆ ಟಿಕೆಟ್ ಕೈತಪ್ಪಿಸಿದ್ದೇ ಇವರು. ಅಪ್ಪ-ಮಕ್ಕಳು ಪಕ್ಷದಲ್ಲಿ ಎಷ್ಟು ವರ್ಷ ಗೂಟ ಹೊಡೆದುಕೊಂಡು ಇರುತ್ತಾರೆ? ಎಂದು ಪ್ರಶ್ನೆ ಮಾಡಿದರು.ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಬಳಸಬಾರದೆಂದು ಹೇಳಲು ಇವರ್ಯಾರು? ನಿಮಗೆ ತಾಕತ್ತಿದ್ದರೆ ಮೋದಿ ಹೆಸರು ಹೇಳದೆ ಮತಯಾಚನೆ ಮಾಡಿ. ನನ್ನ ರಕ್ತದ ಕಣಕಣದಲ್ಲೂ ಮೋದಿ ಇದ್ದಾರೆ. ಅವರ ಫೋಟೊ ಬಳಸಬೇಕೇ ಅಥವಾ ಬೇಡವೇ ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಅಲ್ಲಿಯವರೆಗೂ ಸಮಾಧಾನದಿಂದ ಇರಿ ಎಂದು ತಮ್ಮ ವಿರೋಧಿಗಳ ವಿರುದ್ಧವೂ ಈಶ್ವರಪ್ಪ ವಾಗ್ದಾಳಿ ನಡೆಸಿದರು.

RELATED ARTICLES

Latest News