ಅಹಮದಾಬಾದ್, ಸೆ. 30- ಅರಬ್ಬಿ ಸಮುದ್ರದಲ್ಲಿ ಇರಾನ್ ಮೂಲದ ದೋಣಿಯೊಂದರಿಂದ ಸುಮಾರು ₹3,000 ಕೋಟಿ ಮೌಲ್ಯದ 526 ಕೆ.ಜಿ. ಮೆಥಾಂಫೆಟಮೈನ್ ಮತ್ತು ಹೆರಾಯಿನ್ ಅನ್ನು ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಎಟಿಎಸ್ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿವೆ. ಘಟನೆಯಲ್ಲಿ ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಲಕ್ಷದ್ವೀಪದ ಸಮೀಪ ಈ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಗುಪ್ತಚರ ಮಾಹಿತಿ ಆಧರಿಸಿ ಕರಾವಳಿ ಕಾವಲು ಪಡೆ ಸಮುದ್ರ-ವಾಯು ಕಣ್ಗಾವಲು ನಡೆಸಿ ಅನುಮಾನಾಸ್ಪದ ದೋಣಿಯನ್ನು ಪತ್ತೆಹಚ್ಚಿತ್ತು. ಬಳಿಕ ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ದೋಣಿಯನ್ನು ಬೆನ್ನಟ್ಟಿದ ಅಧಿಕಾರಿಗಳು ಅದರೊಳಗೆ ಪ್ರವೇಶಿಸಿ ಪರಿಶೀಲನೆ ನಡೆಸಿದರು.
ವಶಪಡಿಸಿಕೊಂಡ ಮಾದಕ ವಸ್ತುಗಳಲ್ಲಿ ಅತ್ಯುನ್ನತ ಗುಣಮಟ್ಟದ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ಸೇರಿವೆ. ದೋಣಿ, ಅದರಲ್ಲಿದ್ದ ಸಿಬ್ಬಂದಿ ಹಾಗೂ ಮಾದಕ ವಸ್ತುಗಳನ್ನು ಶಸ್ತ್ರಸಜ್ಜಿತ ಭದ್ರತೆಯಲ್ಲಿ ಮುಂಬೈಗೆ ಕರೆದೊಯ್ದು ಜಂಟಿ ವಿಚಾರಣೆ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಗುಜರಾತ್ ಎಟಿಎಸ್ ಕೂಡ ಕಾರ್ಯಾಚರಣೆಯಲ್ಲಿ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆದಿರುವುದನ್ನು ದೃಢಪಡಿಸಿದೆ. ಸಮುದ್ರ ಮಾರ್ಗದ ಮೂಲಕ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಣೆ ತಡೆಯುವ ಪ್ರಯತ್ನಗಳ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.
