ಬೆಂಗಳೂರು, ಮೇ 23- ಬಿಜೆಪಿಯ ಅತ್ಯಂತ ಕಿರಿಯ ಹಾಗೂ ಚಲನಶೀಲ ರಾಷ್ಟ್ರೀಯ ಅಧ್ಯಕ್ಷರೆನಿಸಿರುವ ನಿತಿನ್ ನಬೀನ್ ಅವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವುದು ಕೇಸರಿ ಪಾಳಯದಲ್ಲಿ ರಣೋತ್ಸಾಹ ಮೂಡಿಸಿದೆ. ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಇದು ಅವರ ಮೊದಲ ಕರ್ನಾಟಕ ಪ್ರವಾಸವಾಗಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿದ ಐತಿಹಾಸಿಕ ಜಯದ ಬೆನ್ನಲ್ಲೇ, ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಪಕ್ಷವನ್ನು ಮರುಸಂಘಟಿಸಲು ಹೈಕಮಾಂಡ್ ಸಂಪೂರ್ಣ ಗಮನ ಹರಿಸಿದೆ.
ಎರಡು ದಿನಗಳ ಭೇಟಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು, ಆರ್‌ಎಸ್‌ಎಸ್ ಪ್ರಮುಖರು ಮತ್ತಿತರರನ್ನು ಭೇಟಿ ಯಾಗಿ ಪಕ್ಷ ಸಂಘಟನೆ ಬಗ್ಗೆ ಮಹತ್ವದ ಸಲಹೆಗಳನ್ನು ಪಡೆಯಲಿದ್ದಾರೆ. ನಾಳೆ ಬೆಳಿಗ್ಗೆ 10.45ಕ್ಕೆ ಮಲ್ಲೇಶ್ವರಂನ ಐತಿಹಾಸಿಕ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವರು. ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಸಾಥ್ ನೀಡಲಿದ್ದಾರೆ.
ಬೆಳಿಗ್ಗೆ 11.10ಕ್ಕೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಲಿರುವ ನಿತಿನ್ ನಬೀನ್ ಅವರಿಗೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅದ್ಧೂರಿ ಮತ್ತು ಸಾಂಪ್ರದಾಯಿಕ ಸ್ವಾಗತ ಕೋರಲಿದ್ದಾರೆ. ಇದಕ್ಕೂ ಮುನ್ನ ನಿತಿನ್ ನಬೀನ್ ಅವರು ನಾಳೆ ಬೆಳಿಗ್ಗೆ 9 ಗಂಟೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಉಪಾಹಾರ ಸೇವಿಸುತ್ತಾ ರಾಜ್ಯ ರಾಜಕೀಯ ಸ್ಥಿತಿಗತಿ ಹಾಗೂ ಮುಂಬರುವ ಜಿಬಿಎ ಚುನಾವಣೆಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.
ನಂತರ ಪಕ್ಷದ ಕಚೇರಿಯಲ್ಲಿ ಅತ್ಯಂತ ಪ್ರಮುಖ ಸಂಘಟನಾತಕ ಸಭೆ ನಡೆಯಲಿದೆ. ಪಕ್ಷದ ಎಲ್ಲಾ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು , ರಾಜ್ಯ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ವಿಭಾಗೀಯ ಉಸ್ತುವಾರಿಗಳು, ಜಿಲ್ಲಾ ಅಧ್ಯಕ್ಷರು ಹಾಗೂ ಐಟಿ-ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಪಕ್ಷದ ತಳಮಟ್ಟದ ಬಲವರ್ಧನೆ, ಇತ್ತೀಚಿನ ಉಪಚುನಾವಣೆಗಳ ಸೋಲಿನ ಪರಾಮರ್ಶೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ.
ಮಧ್ಯಾಹ್ನ 2 ಗಂಟೆಗೆ ನಿತಿನ್ ನಬೀನ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ. ಮೂಲಗಳ ಪ್ರಕಾರ, ಕರ್ನಾಟಕ ಬಿಜೆಪಿ ಕೋರ್ ಕಮಿಟಿಯನ್ನು ಪುನಾರಚಿಸುವ ಸಾಧ್ಯತೆಗಳಿದ್ದು, ಯುವ ಮತ್ತು ಸಕ್ರಿಯ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಚರ್ಚೆಯಾಗಲಿದೆ.
ಪ್ರಸ್ತುತ ರಾಜ್ಯ ಅಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಪೂರ್ಣಾವಧಿ ಅಧ್ಯಕ್ಷರನ್ನಾಗಿ ಮುಂದುವರಿಸುವ ಕುರಿತು ಅನೌಪಚಾರಿಕ ಸಮಾಲೋಚನೆ ನಡೆಯಲಿದ್ದು, ಈ ಭೇಟಿಯು ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಮಧ್ಯಾಹ್ನ 3.45ಕ್ಕೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ರಮಡಾ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಉತ್ತರ ಜಿಲ್ಲಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 4.30ಕ್ಕೆ ರಾಜ್ಯದ ವಿಶೇಷ ತಂಡದೊಂದಿಗೆ ಮಾತುಕತೆ ನಡೆಸಿ ದೆಹಲಿಗೆ ವಾಪಸಾಗಲಿದ್ದಾರೆ.
ಬಿಹಾರದಲ್ಲಿ ಬಿಜೆಪಿಗೆ ಗೆಲುವಿನ ತಂತ್ರ ರೂಪಿಸಿಕೊಟ್ಟ ಚಾಣಕ್ಯ ಎಂದೇ ಹೆಸರಾಗಿರುವ ನಿತಿನ್ ನಬೀನ್ ಅವರ ಈ ಬೆಂಗಳೂರು ಭೇಟಿಯು, ಕರ್ನಾಟಕ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವಿಲ್ಲ.
