Homeಇದೀಗ ಬಂದ ಸುದ್ದಿಶಾಸಕರ ಅಡ್ಡಮತದಾನ: ಧರ್ಮಸ್ಥಳ ಮಂಜುನಾಥನ ಮೊರೆ ಹೋದ ಬಿಜೆಪಿ..!

ಶಾಸಕರ ಅಡ್ಡಮತದಾನ: ಧರ್ಮಸ್ಥಳ ಮಂಜುನಾಥನ ಮೊರೆ ಹೋದ ಬಿಜೆಪಿ..!

ಬೆಂಗಳೂರು, ಜೂ.21- ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸಿದ ಹಿನ್ನೆಲೆ, ಪಕ್ಷದ ಎಲ್ಲಾ ಶಾಸಕರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಯ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಿಸಲು ಬಿಜೆಪಿ ಮುಂದಾಗಿದೆ. ಮುಂದಿನ ವಾರ ಧರ್ಮಸ್ಥಳದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು ಪಕ್ಷದ 63 ಶಾಸಕರು ಕಡ್ಡಾಯವಾಗಿ ಭಾಗವಹಿಸುವಂತೆ ವಿಪ್‌ ಕೂಡ ಜಾರಿ ಮಾಡಲು ಪಕ್ಷವು ತೀರ್ಮಾನಿಸಿದೆ.

ಈ ಮೂಲಕ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸಿದ ಶಾಸಕರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸತ್ವ ಪರೀಕ್ಷೆಗೆ ಒಳಪಡಲಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ, ಸಾಧ್ಯವಾದರೆ ಮುಂದಿನ ವಾರದ ಯಾವುದೇ ದಿನ ಧರ್ಮಸ್ಥಳದಲ್ಲಿ ಪಕ್ಷದ ಶಾಸಕಾಂಗ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಈ ಸಂಬಂಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ನಮ ಪಕ್ಷದ ಮುಖ್ಯ ಸಚೇತಕರಿಗೆ ಎಲ್ಲಾ ಶಾಸಕರಿಗೂ ವಿಪ್‌ ಮಾಡಲು ಸೂಚಿಸಿದ್ದೇವೆ. ಎಲ್ಲರೂ ಕಡ್ಡಾಯವಾಗಿ ಹಾಜರಾಗಲೇಬೇಕು. ಅಡ್ಡ ಮತದಾನ ನಡೆಸಿದವರು ಯಾರು ಎಂಬುದು ಅಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು. ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ ಪಕ್ಷದಿಂದ ನಾಲ್ವರು ಶಾಸಕರು ಅಡ್ಡ ಮತದಾನ ಚಲಾಯಿಸಿದ್ದಾರೆ ಎಂಬ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಈ ಬೆಳವಣಿಗೆಗಳಿಂದ ನಮ ಪಕ್ಷದ ಕಾರ್ಯಕರ್ತರು ಶಾಸಕರ ನಡವಳಿಕೆಗಳ ಬಗ್ಗೆ ಬೇಸರಪಟ್ಟುಕೊಂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಪಕ್ಷದ 63 ಶಾಸಕರ ಮೇಲೂ ಈ ಬೆಳವಣಿಗೆಯಿಂದ ಅನುಮಾನ ಬರುವಂತಾಗಿದೆ. ಸ್ವತಃ ನಮ ಮನೆಯಲ್ಲಿ ಕೂಡ ನಮನ್ನೇ ನಂಬದಂತೆ ಆಗಿದೆ. ಇಂಥಹ ಪಾಪದ ಕೆಲಸ ಮಾಡಿದವರು ಯಾರೆಂಬುದು ಗೊತ್ತಾಗಲಿದೆ ಎಂದರು. ಪಕ್ಷದ ಬೆಳವಣಿಗೆಗಳ ಕುರಿತು ನಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್‌ ನಬೀನ್‌ ಅವರಿಗೆ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದ್ದೇವೆ. ನಾನು ಮತ್ತು ನಮ ವಿಪಕ್ಷ ನಾಯಕರಾದ ಅಶೋಕ್‌ ದೆಹಲಿಗೆ ತೆರಳಿ ಎಲ್ಲ ಮಾಹಿತಿಯನ್ನು ನೀಡುತ್ತೇವೆ. ಅಡ್ಡ ಮತದಾನ ಮಾಡಿದವರನ್ನು ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಅಡ್ಡ ಮತದಾನ ಮಾಡಿದವರು ತಾಯಿಗೆ ದ್ರೋಹ ಮಾಡಿದಂತೆ. ಯಾವುದೇ ಕಾರಣಕ್ಕೂ ಇವರನ್ನು ಕ್ಷಮಿಸುವ ಪ್ರಶ್ನೆ ಇಲ್ಲ ಹೀಗಾಗಿಯೇ ಶಾಸಕಾಂಗ ಸಭೆ ಕರೆಯಲು ತೀರ್ಮಾನಿಸಲಾಗಿದೆ . ಶ್ರೀ ಕ್ಷೇತ್ರದಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಈ ಬೆಳವಣಿಗೆಗಳಿಂದ ನನ್ನ ಮೇಲೂ ಅನುಮಾನ ಬರುವಂತಾಗಿದೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಏನೇನು ಚರ್ಚೆಗಳು ನಡೆಯುತ್ತದೆ ಎಂಬುದನ್ನು ನಾನು ಗಮನಿಸಿದ್ದೇನೆ ಅದಕ್ಕೆ ಬರುವ ಕಾಮೆಂಟ್‌ಗಳ ಬಗ್ಗೆಯೂ ನನಗೆ ಗೊತ್ತಿದೆ. ಹೀಗಾಗಿ ಶ್ರೀ ಕ್ಷೇತ್ರದಲ್ಲಿ ಎಲ್ಲವೂ ಬಹಿರಂಗವಾಗಲಿದೆ ಇದನ್ನು ತಾರ್ಕಿಕಂತ್ಯಕ್ಕೆ ತೆಗೆದುಕೊಂಡು ಹೋಗುವವರೆಗೂ ಸುಮನೆ ಬಿಡುವುದಿಲ್ಲ ಎಂದು ವಿಜಯೇಂದ್ರ ಗುಡುಗಿದರು.

ನಮ ಪಕ್ಷದ ಕಾರ್ಯಕರ್ತರ ಪರಿಶ್ರಮ ಮತ್ತು ಜನರ ಆಶೀರ್ವಾದದಿಂದ ಗೆದ್ದು ಅಡ್ಡ ಮತದಾನ ಮಾಡಿದ್ದಾರೆ ಎಂದರೆ ಇವರನ್ನು ಹೇಗೆ ಕ್ಷಮಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಜನರು ಇವರನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದರು. ಇತ್ತೀಚಿನ ಬೆಳವಣಿಗೆಗಳಿಂದ ಕಾರ್ಯಕರ್ತರ ಮನಸ್ಸಿಗೆ ತುಂಬಾ ನೋವಾಗಿದೆ. ಇದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ಯಾವ ಶಾಸಕರು ಏನೇನು ಪಡೆದಿದ್ದ, ಪಡೆದುಕೊಂಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಎಲ್ಲಾ ವಿಷಯಗಳ ಬಗ್ಗೆಯೂ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು. ಪಕ್ಷದಲ್ಲಿ ಬದಲಾವಣೆ ಮಾಡಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ನೀಡಬೇಕೆಂಬ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿಕೆಗೆ ವಿಜಯೇಂದ್ರ ಸಿಡಿಮಿಡಿಗೊಂಡರು.

ಯಾರಿಗೆ ಏನು ಉತ್ತರ ಕೊಡಬೇಕು ಕೊಡುತ್ತೇವೆ. ಯಾರೋ ಒಬ್ಬರು ಪುಕ್ಕಟೆ ಹೇಳಿಕೆಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ. ಅಂತವರು ಜಿಲ್ಲಾ ಪಂಚಾಯತ್‌ ಚುನಾವಣೆಗೆ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ನನ್ನ ಬಗ್ಗೆ ಮಾತನಾಡುವವರು ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಗೆದ್ದು ಬರಲಿ. ಆಮೇಲೆ ವಿರೋಧ ಪಕ್ಷದ ನಾಯಕನ ಸ್ಥಾನ ಅಥವಾ ಬೇರೆ ಸ್ಥಾನಮಾನವನ್ನು ಕೇಳಲಿ ಎಂದು ಪರೋಕ್ಷವಾಗಿ ಕುಮಾರ್‌ ಬಂಗಾರಪ್ಪ ಹೆಸರು ಹೇಳದೆ ಠಕ್ಕರ್‌ ನೀಡಿದರು.

RELATED ARTICLES
spot_img

Latest News