ಡೆಹ್ರಾಡೂನ್(ಉತ್ತರಾಖಂಡ),ಸೆ.2-ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್ಯಾಲಿ ನಂತರ ನಡೆದ ಸ್ಥಳದ ಶುದ್ಧೀಕರಣ ವಿವಾದ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ವಿವಾದದ ಕೇಂದ್ರಬಿಂದುವಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಪರಿಶಿಷ್ಟ ಜಾತಿ (ಎಸ್‌ಸಿ) ಮೋರ್ಚಾ ಡೆಹ್ರಾಡೂನ್‌ನಲ್ಲಿ ಬುದ್ಧಿ ಶುದ್ಧಿ ಯಜ್ಞ ನಡೆಸಿದೆ.
ವಿವಾದದ ಹಿನ್ನೆಲೆ: ಆಗಸ್ಟ್ 11 ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿ ಬಳಿಕ ಆ ಸ್ಥಳದಲ್ಲಿ ಶುದ್ಧೀಕರಣ ಮಾಡಿ ಹವನ ನಡೆಸಲಾಗಿತ್ತು. ಇದು ಮಲ್ಲಿಕಾರ್ಜುನ ಖರ್ಗೆ ಅವರ ದಲಿತ ಗುರುತಿಗೆ ಅಪಮಾನ ಮಾಡುವ ಯತ್ನ ಹಾಗೂ ಅಸ್ಪಶ್ಯತೆಯ ಕೃತ್ಯ ಎಂದು ಕಾಂಗ್ರೆಸ್ ತೀವ್ರವಾಗಿ ಆಕ್ಷೇಪಿಸಿತ್ತು. ಈ ಆಚರಣೆಯಲ್ಲಿ ಭಾಗಿಯಾದವರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಉತ್ತರಾಖಂಡದಾದ್ಯಂತ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದಾರೆ ಹಾಗೂ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಜಾತಿಗೆ ಜೋಡಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಮತ್ತೊಂದೆಡೆ, ವಾಲೀಕಿ ಸಮುದಾಯದ ಅಮಿತ್ ಕುಮಾರ್ ಎಂಬುವವರ ದೂರಿನ ಮೇರೆಗೆ, ರಾಹುಲ್ ಗಾಂಧಿಯವರ ಹೇಳಿಕೆಗಳು ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿವೆ ಮತ್ತು ಜಾತೀಯತೆ ಬಿತ್ತುವಂತಿವೆ ಎಂದು ಆರೋಪಿಸಿ ರಾಹುಲ್ ಗಾಂಧಿ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳು ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಸುಳ್ಳುಗಳನ್ನು ಹರಡುವುದನ್ನು ನಿಲ್ಲಿಸಿ ಸತ್ಯ ತಿಳಿಯಲಿ ಎಂಬ ಉದ್ದೇಶದಿಂದ ಬಿಜೆಪಿಯ ಎಸ್‌ಸಿ ಮೋರ್ಚಾ ರಾಹುಲ್ ಗಾಂಧಿಯವರ ಚಿತ್ರವಿಟ್ಟು ಬುದ್ಧಿ ಶುದ್ಧಿ ಯಜ್ಞ ನೆರವೇರಿಸಿದೆ. ಅಲ್ಲದೆ, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹನ ಮಾಡಲಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳ ಎಚ್ಚರಿಕೆ ನೀಡಿದ್ದು, ಮುಂಬರುವ ದಿನಗಳಲ್ಲಿ ಈ ವಿವಾದ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.
