ತಿಪಟೂರು,ಫೆ.14-ಭಕ್ತನಿಗೂ ಭಗವಂತನಿಗೂ ಸಂಬಂಧ ಬೆಸೆದುಕೊಳ್ಳುವ ಸ್ಥಳ ದೇವಾಲಯವಾಗಿದ್ದು, ಶಕ್ತಿ ಮತ್ತು ನಂಬಿಕೆ ಇಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಆ ನಂಬಿಕೆಯಿಂದಲೇ ನಾವು ಕಾರ್ಯನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದಲ್ಲಿ ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವ ಹಾಗೂ ಕರಿಬಸವಸ್ವಾಮಿಗಳ 233ನೇ ವಾರ್ಷಿಕ ಸರಣೋತ್ಸವದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಡಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆರ್ಶೀವಾದ ಪಡೆದು ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಇವತ್ತಿಗೆ ಒಂದು ಸಾವಿರ ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಶ್ರೀಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಾನು ಭಾಗವಹಿಸಿ ಆರ್ಶಿವಾದವನ್ನು ಪಡೆದಿದ್ದೇನೆ.
ಇಲ್ಲಿಗೆ ಮಠದ ಭಕ್ತನಾಗಿ ಹಾಗೂ ಅಜ್ಜಯ್ಯನ ಶಿಷ್ಯನಾಗಿ ಮಠಕ್ಕೆ ಆಗಮಿಸಿದ್ದು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಕೆಲವರು ನಗೆಗೆ ಒಳಾಗದರು ಇನ್ನೂ ಕೆಲವರು ಸಂತೋಷಪಟ್ಟರು. ಆದರೆ ಮನುಷ್ಯನಿಗೆ ನಂಬಿಕೆ ಮುಖ್ಯ. ಆ ನಂಬಿಕೆಯ ಮೇಲೇ ನಾನು ಕ್ಷೇತ್ರಕ್ಕೆ ಹಲವಾರು ವರ್ಷಗಳಿಂದ ಬರುತ್ತಿದ್ದೇನೆ ಎಂದರು. ಶಿವರಾತ್ರಿಯ ಹಬ್ಬ ಕಳೆದ ನಂತರ ಶುಭವಾಗಲಿದೆ. ಎಲ್ಲರಿಗೂ ಒಳ್ಳೆಯದಾಗಲಿದೆ. ಮನುಷ್ಯನ ಬದುಕನ್ನು ಶ್ರೇಷ್ಠಗೊಳಿಸಿ, ನೆಮದಿಯಿಂದ ಜೀವನ ಸಾಗಿಸುವುದೇ ನಮ ಗುರಿಯಾಗಿದೆ ಎಂದರು.
ಲಿಂಗಕ್ಕೆ ಆಚಾರವೇ ಆಶ್ರಯ, ಆಚಾರಕ್ಕೆ ಪ್ರಾಣವೇ ಆಶ್ರಯ, ಪ್ರಾಣಕ್ಕೆ ಜ್ಞಾನವೇ ಆಶ್ರಯ, ಜ್ಞಾನಕ್ಕೆ ಲಿಂಗವೇ ಆಶ್ರಯ, ಲಿಂಗಕ್ಕೆ ಜಂಗಮವೇ ಆಶ್ರಯ. ಗುರುವಿನಿಂದಲೇ ಬಂಧುಗಳು, ದೈವಗಳು ಮತ್ತು ಜಗತ್ತಿಗೆ ಪುಣ್ಯ ಸಿಗುತ್ತದೆ ಆದ್ದರಿಂದ ಹಿರಿಯರ ವಾಣಿಯಂತೆ ಮನೆಮಠಗಳನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಸಂದೇಶವಿರುವಂತೆ, ಈ ಮಠವನ್ನು ಕಾಪಾಡುವುದು ಭಕ್ತರ ಕರ್ತವ್ಯವಾಗಿದೆ ಗುರು ಜಗತ್ತಿನ ಪಾಲಕನಾಗಿದ್ದು, ನಂಬಿಕೆ ಜೀವನದಲ್ಲಿ ಅತ್ಯಂತ ಮುಖ್ಯ ಎಂದು ಹೇಳಿದರು.
ಯಾವ ದೇವರು ವರ ಅಥವಾ ಶಾಪ ನೀಡುವುದಿಲ್ಲ. ಅವಕಾಶವನ್ನು ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಹೃದಯ ಶ್ರೀಮಂತಿಕೆಯಿಂದ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಅವರು ತಿಳಿಸಿದರು. ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಶ್ರೀಮಠವು ಅನ್ನದಾಸೋಹದೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಎಲ್ಲ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಮಠ ಶ್ರಮಿಸುತ್ತಿದೆ ಎಂದರು.
ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯನ ಯಶಸ್ಸಿಗೆ ಗುರಿ ಹಾಗೂ ಮಾರ್ಗದರ್ಶನ ಬಹಳ ಮುಖ್ಯ. ಉತ್ತಮವಾದ ಗುರಿ ಹೊಂದುವ ಜೊತೆ ಸಂಸ್ಕಾರ ಸಂಸ್ಕೃತಿಯನ್ನು ಬೆಳಸಿಕೊಳ್ಳಬೇಕು ಎಂದರು. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದು, ರಾಮನಗರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಧಾರವಾಡ ಅಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹಾವೇರಿಯ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.
ಜಾತ್ರೆಯ ಅಂಗವಾಗಿ 108 ಮುತ್ತೃದೆಯರಿಗೆ ಬಾಗಿನ ಸೇವೆ, ಚಿಣ್ಣರ ಸಂತೆ, ಹೊನಲು ಬೆಳಗಿನ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿ, ಕಾಡಸಿದ್ದೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ಮೂರು ದಿನಗಳ ಕಾಲ ಕೃಷಿ ಉತ್ಪನ್ನಗಳ ಪ್ರದರ್ಶನ ಜರುಗಿತು.
ಶಾಸಕರಾದ ಕೆ.ಷಡಕ್ಷರಿ ,ನರೇಂದ್ರಸ್ವಾಮಿ, ಮಾಜಿ ಶಾಸಕ ಬಿ.ನಂಜಾಮರಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಕೆಪಿಸಿಸಿ ಸದಸ್ಯ ಯೋಗೀಶ್, ಜಿಲ್ಲಾ ಕಾಂಗ್ರೆಸ್ ಯುವಘಟಕ ಅಧ್ಯಕ್ಷ ನಿಖಿಲ್ ರಾಜಣ್ಣ, ಸೇರಿದಂತೆ ತಾಲೂಕು ಆಡಳಿತ ವರ್ಗದ ಅಧಿಕಾರಿಗಳು ಉಪಸ್ಥಿತರಿದ್ದರು.
