Homeಅಂತಾರಾಷ್ಟ್ರೀಯಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ ಆರೋಪ : ಐಫೆಲ್‌ ಟವರ್‌ ನೌಕರರ...

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ ಆರೋಪ : ಐಫೆಲ್‌ ಟವರ್‌ ನೌಕರರ ಮುಷ್ಕರ

ಪ್ಯಾರಿಸ್‌, ಸೆ.8- ವಿಶ್ವವಿಖ್ಯಾತ ಐಫೆಲ್‌ ಟವರ್‌ಗೆ ಭಾರತೀಯ ಹಿಂದೂ ಧಾರ್ಮಿಕ ನಿಯೋಗವೊಂದು ಭೇಟಿ ನೀಡಿದ್ದ ವೇಳೆ ಮಹಿಳಾ ಸಿಬ್ಬಂದಿಗೆ ಕೆಲಸದ ಸ್ಥಳದಿಂದ ದೂರವಿರುವಂತೆ ಸೂಚಿಸಲಾಗಿದೆ ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದೆ.

ಧರ್ಮದ ಹೆಸರಿನಲ್ಲಿ ಮಹಿಳಾ ಸಿಬ್ಬಂದಿಯನ್ನು ಬದಿಗಿರಿಸಿರುವುದು ಲಿಂಗ ತಾರತಮ್ಯ ಎಂದು ಆರೋಪಿಸಿ ಐಫೆಲ್‌ ಟವರ್‌ ನೌಕರರು ದಿಢೀರ್‌ ಮುಷ್ಕರ ನಡೆಸಿದ್ದಾರೆ. ಇದರ ಪರಿಣಾಮವಾಗಿ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಸಾವಿರಾರು ಪ್ರವಾಸಿಗರು ಪರದಾಡುವಂತಾಗಿದೆ.

ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ಗೆ ಸುಮಾರು 100 ಸದಸ್ಯರಿದ್ದ ಭಾರತೀಯ ಹಿಂದೂ ಧಾರ್ಮಿಕ ಸಂಸ್ಥೆ ಬಿಎಪಿಎಸ್‌ ನಿಯೋಗ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಿಯೋಗದ ಭೇಟಿಯ ವೇಳೆ ಮಹಿಳಾ ಉದ್ಯೋಗಿಗಳು ಕೆಲಸದ ಸ್ಥಳದಿಂದ ದೂರವಿರಬೇಕು, ಕಣ್ಣಿಗೆ ಕಾಣಿಸಿಕೊಳ್ಳಬಾರದು ಹಾಗೂ ಕೆಲವೆಡೆ ಅವರ ಬದಲಿಗೆ ಪುರುಷ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಇದನ್ನು ತೀವ್ರವಾಗಿ ವಿರೋಧಿಸಿದ ಐಫೆಲ್‌ ಟವರ್‌ ನೌಕರರ ಒಕ್ಕೂಟವು ದಿಢೀರ್‌ ಮುಷ್ಕರಕ್ಕೆ ಕರೆ ನೀಡಿದೆ. ನೌಕರರ ಪ್ರತಿಭಟನೆಯಿಂದಾಗಿ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಐಫೆಲ್‌ ಟವರ್‌ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು.

ಘಟನೆ ಫ್ರಾನ್ಸ್‌ನಲ್ಲಿ ವ್ಯಾಪಕ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಐಫೆಲ್‌ ಟವರ್‌ ನಿರ್ವಹಣಾ ಸಂಸ್ಥೆ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದೆ ಎನ್ನಲಾಗಿದೆ. ಪ್ರಕರಣದ ಕುರಿತು ಫ್ರಾನ್ಸ್‌ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.

RELATED ARTICLES
spot_img

Latest News