Homeರಾಜ್ಯರಾಜ್ಯದ 90 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ

ರಾಜ್ಯದ 90 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ

ಬೆಂಗಳೂರು, ಸೆ.8- ಸರ್ಕಾರಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಕರ್ನಾಟಕದ ಸಾವಿರಾರು ಯುವಜನರಿಗೆ ಮಹತ್ವದ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಸುಮಾರು ₹9 ಕೋಟಿ ವೆಚ್ಚದಲ್ಲಿ 90 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ. ಯೋಜನೆ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆಯಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸುಲಭವಾಗಿ ಲಭ್ಯವಾಗಲಿದೆ ಎಂಬ ನಿರೀಕ್ಷೆಯಿದೆ.

ಕರ್ನಾಟಕದ ನಿವಾಸಿಗಳಾಗಿರುವ ಅರ್ಹ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಒಬ್ಬ ವಿದ್ಯಾರ್ಥಿ ಒಂದೇ ಸಂದರ್ಭದಲ್ಲಿ ಗರಿಷ್ಠ ಮೂರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿರಲಿದೆ.

ಹಲವು ನೇಮಕಾತಿ ಪರೀಕ್ಷೆಗಳಿಗೆ ತರಬೇತಿ

ಸಹಾಯಕ ಪ್ರಾಧ್ಯಾಪಕ, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರೂಪ್‌-ಸಿ, ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌, ಗ್ರಾಮ ಆಡಳಿತ ಅಧಿಕಾರಿ (ವಿಎಒ), ಪೊಲೀಸ್‌ ಕಾನ್‌ಸ್ಟೆಬಲ್‌ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅಗತ್ಯವಿರುವ ವಿಷಯಗಳನ್ನು ತರಬೇತಿ ವ್ಯಾಪ್ತಿಯಲ್ಲಿ ಒಳಗೊಳ್ಳುವ ಉದ್ದೇಶ ಹೊಂದಲಾಗಿದೆ.

ಸೇವಾ ಸಿಂಧು ಈಗಾಗಲೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಡಿಜಿಟಲ್‌ ವೇದಿಕೆಯಲ್ಲಿ ಒದಗಿಸುವ ಪ್ರಮುಖ ವ್ಯವಸ್ಥೆಯಾಗಿದ್ದು, ನೂರಾರು ಸರ್ಕಾರಿ ಸೇವೆಗಳು ಈ ವೇದಿಕೆಯೊಂದಿಗೆ ಸಂಯೋಜಿಸಲ್ಪಟ್ಟಿವೆ. ಆಯ್ಕೆಯಾಗುವ ತರಬೇತಿ ಸಂಸ್ಥೆಯು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ವಿಶೇಷ ವೆಬ್‌ ಪೋರ್ಟಲ್‌ ಹಾಗೂ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿ ನಿರ್ವಹಿಸಲಿದೆ.

360 ಆನ್‌ಲೈನ್‌ ತರಗತಿಗಳು

ಯೋಜನೆಯಡಿ ಸುಮಾರು 360 ಸಂವಾದಾತ್ಮಕ ಆನ್‌ಲೈನ್‌ ತರಬೇತಿ ಅವಧಿಗಳನ್ನು ನಡೆಸುವ ಉದ್ದೇಶವಿದೆ. ಪ್ರತಿ ತರಗತಿಯು ಸುಮಾರು 90ರಿಂದ 120 ನಿಮಿಷಗಳ ಅವಧಿಯದ್ದಾಗಿರಲಿದೆ. ಪ್ರತಿ ಪರೀಕ್ಷೆಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮವನ್ನು ಗರಿಷ್ಠ 90 ದಿನಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯವಾಗಿರುವ ಪಠ್ಯಕ್ರಮವನ್ನು ಸಮಗ್ರವಾಗಿ ಒಳಗೊಳ್ಳುವಂತೆ ತರಬೇತಿ ರೂಪಿಸಲಾಗುತ್ತಿದೆ. ಸಾಮಾನ್ಯ ಅಧ್ಯಯನ ವಿಭಾಗದಲ್ಲಿ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಇತಿಹಾಸ, ಕರ್ನಾಟಕದ ಇತಿಹಾಸ, ಭೌತಿಕ ಹಾಗೂ ಭಾರತೀಯ ಭೂಗೋಳ, ಕರ್ನಾಟಕದ ಭೂಗೋಳ, ಭಾರತೀಯ ಆರ್ಥಿಕತೆ ಮತ್ತು ಭಾರತೀಯ ರಾಜಕೀಯ ವ್ಯವಸ್ಥೆ ವಿಷಯಗಳಿಗೆ ಒತ್ತು ನೀಡಲಾಗುತ್ತದೆ.

ವಿಜ್ಞಾನ ಮತ್ತು ಪರಿಸರ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ ಬೆಳವಣಿಗೆಗಳು, ಪರಿಸರ ವಿಜ್ಞಾನ ಹಾಗೂ ಪರಿಸರಶಾಸ್ತ್ರ ಒಳಗೊಂಡಿರಲಿದೆ. ಇದರ ಜತೆಗೆ ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌, ತಾರ್ಕಿಕ ಸಾಮರ್ಥ್ಯ, ಡೇಟಾ ಇಂಟರ್‌ಪ್ರಿಟೇಷನ್‌ ಮತ್ತು ಸಮಸ್ಯೆ ಪರಿಹಾರ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.

ಒಬ್ಬ ವಿದ್ಯಾರ್ಥಿಗೆ ₹1,000 ವೆಚ್ಚ

ಯೋಜನೆಯ ಅಂದಾಜಿನ ಪ್ರಕಾರ ಒಬ್ಬ ವಿದ್ಯಾರ್ಥಿಯ ತರಬೇತಿಗೆ ಸುಮಾರು ₹1,000 ವೆಚ್ಚವಾಗಲಿದೆ. 90 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದಲ್ಲಿ ಒಟ್ಟು ವೆಚ್ಚ ಸುಮಾರು ₹9 ಕೋಟಿಯಾಗಲಿದೆ. ಆದರೆ ತರಬೇತಿ ಸಂಸ್ಥೆಗೆ ನಿಗದಿತ ಗುರಿ ಸಂಖ್ಯೆಯ ಆಧಾರದ ಮೇಲೆ ಮಾತ್ರ ಪಾವತಿ ಮಾಡುವುದಿಲ್ಲ. ವಾಸ್ತವವಾಗಿ ನೋಂದಣಿ ಮಾಡಿಕೊಂಡು ತರಬೇತಿಗೆ ಅರ್ಹತೆ ಪಡೆದ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಪಾವತಿ ಮಾಡುವ ವ್ಯವಸ್ಥೆ ಇರಲಿದೆ.

ಒಂದು ವೇಳೆ 90 ಸಾವಿರದೊಳಗೆ ಮಾತ್ರ ನೋಂದಣಿ ನಡೆದರೆ, ಮುಂದಿನ ಬ್ಯಾಚ್‌ಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ನೋಂದಣಿ ಸಂಖ್ಯೆ 90 ಸಾವಿರ ಮೀರಿದರೂ, ಹೆಚ್ಚುವರಿ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಬೇಕೆಂಬ ಷರತ್ತನ್ನು ಯೋಜನೆಯಲ್ಲಿ ಸೇರಿಸಲಾಗಿದೆ.

ಈ ಯೋಜನೆಯ ಮೂಲಕ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ದುಬಾರಿ ಕೋಚಿಂಗ್‌ ಕೇಂದ್ರಗಳ ಅವಲಂಬನೆಯಿಲ್ಲದೆ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ದೊರೆಯುವ ನಿರೀಕ್ಷೆಯಿದೆ.

RELATED ARTICLES
spot_img

Latest News