Homeರಾಜ್ಯಯಶವಂತಪುರ ಎಪಿಎಂಸಿಯಲ್ಲಿ ಸಿಎಂ ಎದುರು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ರೈತರು

ಯಶವಂತಪುರ ಎಪಿಎಂಸಿಯಲ್ಲಿ ಸಿಎಂ ಎದುರು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ರೈತರು

ಬೆಂಗಳೂರು, ಸೆ.8- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಇಂದು ಬೆಳ್ಳಂಬೆಳಗ್ಗೆ ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್‌ ಭೇಟಿ ನೀಡಿ, ರೈತರು, ವರ್ತಕರು ಹಾಗೂ ಮಂಡಿ ಮಾಲೀಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ರೈತರು ಬೆಳೆ ವಿಮೆ, ಈರುಳ್ಳಿ ಬೆಲೆ, ತೂಕದಲ್ಲಿ ವಂಚನೆ, ಕಮಿಷನ್‌ ಹಾಗೂ ವಿದ್ಯುತ್‌ ಸಂಪರ್ಕ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಇಟ್ಟನಹಳ್ಳಿ ಗ್ರಾಮದ ರೈತರೊಬ್ಬರು, ಬೆಳೆ ವಿಮೆಗಾಗಿ ಸ್ವಸಹಾಯ ಸೊಸೈಟಿಗೆ ಹಣ ಪಾವತಿಸಿದ್ದರೂ, ಸೊಸೈಟಿ ಡಿಸಿಸಿ ಬ್ಯಾಂಕ್‌ಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ವಿಮೆ ತಿರಸ್ಕೃತಗೊಂಡಿರುವ ಸಂದೇಶ ಬಂದಿದೆ ಎಂದು ಸಿಎಂಗೆ ಅಳಲು ತೋಡಿಕೊಂಡರು.

ರೈತರು ವಿಮೆಗಾಗಿ ಹಣ ಪಾವತಿಸಿರುವ ಪಟ್ಟಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ, 93 ರೈತರಿಗೆ ಬೆಳೆ ವಿಮೆ ದೊರೆಯದಿರುವ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯನ್ನು ತಕ್ಷಣ ವಜಾಗೊಳಿಸುವಂತೆ ಸೂಚಿಸಿದರು.

ಈರುಳ್ಳಿ ಬೆಳೆಗಾರರ ಸಮಸ್ಯೆ ಆಲಿಕೆ

ಮಾರುಕಟ್ಟೆಗೆ ಈರುಳ್ಳಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ತಂದಿದ್ದ ರೈತರೊಂದಿಗೆ ಸಿಎಂ ಸುದೀರ್ಘವಾಗಿ ಮಾತುಕತೆ ನಡೆಸಿದರು. ಈರುಳ್ಳಿ ಸಾಗಿಸುವಾಗ ಪೊಲೀಸರು ತಡೆಯುತ್ತಾರೆಯೇ, ಎಪಿಎಂಸಿಯಲ್ಲಿ ರೈತರಿಗೆ ಸಕಾಲದಲ್ಲಿ ಹಣ ಪಾವತಿಸಲಾಗುತ್ತಿದೆಯೇ, ವರ್ತಕರು ಎಷ್ಟು ಕಮಿಷನ್‌ ಪಡೆಯುತ್ತಾರೆ, ಪ್ರತಿ ಎಕರೆಗೆ ಎಷ್ಟು ಖರ್ಚಾಗುತ್ತದೆ ಹಾಗೂ ಬೆಳೆಯ ತೂಕವನ್ನು ಸರಿಯಾಗಿ ಮಾಡಲಾಗುತ್ತಿದೆಯೇ ಎಂಬುದನ್ನು ವಿಚಾರಿಸಿದರು.

ಈ ವೇಳೆ ಸಿಎಂ ಅವರೇ ಖುದ್ದಾಗಿ ಈರುಳ್ಳಿ ಚೀಲಗಳ ತೂಕವನ್ನು ಪರಿಶೀಲಿಸಿದರು.

ಕಲಬುರಗಿ, ಬೀದರ್‌ ಹಾಗೂ ವಿಜಯಪುರ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಲ್‌ಗೆ 8ರಿಂದ 10 ರೂ.ವರೆಗೆ ಕಮಿಷನ್‌ ಪಡೆಯಲಾಗುತ್ತದೆ. ಆದರೆ ಯಶವಂತಪುರ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್‌ ಪಡೆಯುವುದಿಲ್ಲ. ಹೀಗಾಗಿ ನಾವು ಇಲ್ಲಿಗೆ ಈರುಳ್ಳಿ ತರುತ್ತೇವೆ ಎಂದು ರೈತರು ತಿಳಿಸಿದರು.

ಮಳೆ ಕೊರತೆಯಿಂದ ಈ ಬಾರಿ ಈರುಳ್ಳಿ ಇಳುವರಿ ಗಣನೀಯವಾಗಿ ಕುಸಿದಿದೆ. ಸಾಮಾನ್ಯವಾಗಿ ಎಕರೆಗೆ 150ರಿಂದ 200 ಚೀಲ ಇಳುವರಿ ಬರುತ್ತಿದ್ದರೆ, ಈ ಬಾರಿ ಕೇವಲ 50 ಚೀಲದಷ್ಟು ಮಾತ್ರ ದೊರೆತಿದೆ ಎಂದು ರೈತರು ಹೇಳಿದರು. ಮತ್ತೊಂದೆಡೆ, ಹೆಚ್ಚು ಮಳೆಯಾದರೆ ಜಮೀನಿನಲ್ಲೇ ಈರುಳ್ಳಿ ಕೊಳೆಯುವ ಸಾಧ್ಯತೆಯಿದ್ದು, ಮಾರುಕಟ್ಟೆಗೆ ಸಾಗಿಸುವ ವೆಚ್ಚಕ್ಕೂ ತಕ್ಕ ಬೆಲೆ ಸಿಗದ ಪರಿಸ್ಥಿತಿ ಎದುರಾಗುತ್ತದೆ ಎಂದು ಅಳಲು ತೋಡಿಕೊಂಡರು.

ಹೆಕ್ಟೇರ್‌ಗೆ ₹6,500 ವಿಮೆ ಕಟ್ಟಿದರೂ ಪರಿಹಾರವಿಲ್ಲ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೈತರೊಬ್ಬರು, ಬೆಳೆಗೆ ಹೆಕ್ಟೇರ್‌ಗೆ 6,500 ರೂ. ವಿಮೆ ಪಾವತಿಸಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಕಮಿಷನ್‌ ಹೆಚ್ಚಿಗೆ ಪಡೆದರೆ ಕ್ರಮ

ಎಪಿಎಂಸಿ ಮಂಡಿ ವರ್ತಕರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ, ಎಪಿಎಂಸಿಗೆ ಎಷ್ಟು ಮೊತ್ತ ಪಾವತಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಓರ್ವ ವರ್ತಕರು ಪ್ರತಿ 100 ರೂ.ಗೆ 60 ಪೈಸೆ ಪಾವತಿಸುತ್ತೇವೆ ಎಂದರೆ, ಮತ್ತೋರ್ವ ವರ್ತಕರು ಒಂದು ರೂ. ಪಾವತಿಸುತ್ತೇವೆ ಎಂದು ತಿಳಿಸಿದರು.

ರೈತರಿಂದ ನಿಗದಿಗಿಂತ ಹೆಚ್ಚಿನ ಮೊತ್ತ ವಸೂಲಿ ಮಾಡಿದರೆ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದ ಸಿಎಂ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಕೆಲವರು ಎಪಿಎಂಸಿ ಮಾರುಕಟ್ಟೆಗೆ ಉತ್ಪನ್ನಗಳನ್ನು ತರದೆ, ನೇರವಾಗಿ ರೈತರಿಂದ ಖರೀದಿಸುತ್ತಾರೆ. ಈ ವೇಳೆ ಬೆಲೆ ನಿಗದಿಪಡಿಸಿ, ತೂಕದಲ್ಲಿ ಕಡಿಮೆ ತೋರಿಸಿ ಉತ್ಪನ್ನಗಳನ್ನು ಖರೀದಿಸುತ್ತಾರೆ ಎಂದು ರೈತರು ದೂರಿದರು.ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ರೈತರಿಂದ ನೇರವಾಗಿ ಖರೀದಿ ಮಾಡುವವರು ತೂಕದಲ್ಲಿ ವಂಚನೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ್‌ ಸಂಪರ್ಕಕ್ಕೆ ಮನವಿ

ಕೂಡ್ಲಿಗಿ ತಾಲ್ಲೂಕಿನ ಹೊಸಹಟ್ಟಿ ಗ್ರಾಮದ ಈರುಳ್ಳಿ ಬೆಳೆಗಾರ ಆಂಜನಪ್ಪ ಅವರೊಂದಿಗೆ ಮಾತನಾಡಿದ ಸಿಎಂ, ನೀರಿನ ವ್ಯವಸ್ಥೆ ಹೇಗಿದೆ ಎಂದು ವಿಚಾರಿಸಿದರು.ತೋಟದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ವಿದ್ಯುತ್‌ ಸಂಪರ್ಕಕ್ಕಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದರೂ ಇನ್ನೂ ಸಂಪರ್ಕ ದೊರೆತಿಲ್ಲ. ತಮ್ಮೊಬ್ಬರ ಸಮಸ್ಯೆಯಲ್ಲ, ಇದೇ ರೀತಿಯಾಗಿ ಹತ್ತಾರು ಮನೆಗಳಿಗೆ ವಿದ್ಯುತ್‌ ಸಂಪರ್ಕದ ಸಮಸ್ಯೆ ಇದೆ ಎಂದು ರೈತರು ತಿಳಿಸಿದರು.

ಪ್ರಜಾಸೇವಾ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದಿತ್ತಲ್ಲವೇ ಎಂದು ಸಿಎಂ ಪ್ರಶ್ನಿಸಿದರು. ಯಾವುದೇ ಆತಂಕಪಡಬೇಕಿಲ್ಲ. ಎಲ್ಲ ಅರ್ಹ ಮನೆಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಮುಖ್ಯಮಂತ್ರಿಗಳ ಈ ದಿಢೀರ್‌ ಭೇಟಿ ವೇಳೆ, ಮಾರುಕಟ್ಟೆಯಲ್ಲಿನ ಬೆಳೆ ಮಾರಾಟ, ತೂಕ, ಕಮಿಷನ್‌, ಬೆಳೆ ವಿಮೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಬೆಳಕಿಗೆ ಬಂದವು.

RELATED ARTICLES
spot_img

Latest News