ಹುಬ್ಬಳ್ಳಿ, ಸೆ.8- ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಲ್ವಾರ್ ಹಿಡಿದು ಫೋಟೊ ಹಂಚಿಕೊಂಡಿದ್ದ ಹಳೇ ಹುಬ್ಬಳ್ಳಿಯ ಈಶ್ವರನಗರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ, ತಲ್ವಾರ್ ವಶಪಡಿಸಿಕೊಂಡಿದ್ದಾರೆ.ಗಂಗಾಧರ ಮಡಿವಾಳ ಬಂಧಿತ ಆರೋಪಿ. ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸುವ ರೀತಿಯಲ್ಲಿ ತಲ್ವಾರ್ ಹಿಡಿದುಕೊಂಡಿರುವ ಫೋಟೊವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ಚಾಕು ಇರಿತ ನಿಗ್ರಹ ಪಡೆ ಅಧಿಕಾರಿ ಎಎಸ್‌ಐ ಎಸ್.ಜಿ. ವಡ್ಡರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ತಲ್ವಾರ್ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
