Homeರಾಷ್ಟ್ರೀಯಷರಿಯಾ ನ್ಯಾಯಾಲಯಗಳಿಗೆ ವಿಚ್ಛೇದನದ ನೀಡಲು ಅಧಿಕಾರವಿಲ್ಲ : ಛತ್ತೀಸ್‌‍ಗಢ ಹೈಕೋರ್ಟ್‌

ಷರಿಯಾ ನ್ಯಾಯಾಲಯಗಳಿಗೆ ವಿಚ್ಛೇದನದ ನೀಡಲು ಅಧಿಕಾರವಿಲ್ಲ : ಛತ್ತೀಸ್‌‍ಗಢ ಹೈಕೋರ್ಟ್‌

ರಾಯ್‌ಪುರ, ಸೆ.8- ಖಾಸಗಿ ಧಾರ್ಮಿಕ ಸಂಸ್ಥೆಗಳು ಅಥವಾ ಶರಿಯಾ ನ್ಯಾಯಾಲಯಗಳು ಧಾರ್ಮಿಕ ಅಭಿಪ್ರಾಯ, ಫತ್ವಾ ಅಥವಾ ಸಲಹೆಗಳನ್ನು ನೀಡಬಹುದೇ ಹೊರತು, ಕಾನೂನುಬದ್ಧ ಆದೇಶಗಳ ಮೂಲಕ ವ್ಯಕ್ತಿಯ ವೈವಾಹಿಕ ಹಕ್ಕುಗಳು ಅಥವಾ ಸ್ಥಿತಿಯನ್ನು ಬದಲಾಯಿಸುವ ಹಾಗೂ ವಿಚ್ಛೇದನ ನೀಡುವ ಅಧಿಕಾರ ಹೊಂದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ರಾಯ್‌ಪುರದ ಶರಿಯಾ ನ್ಯಾಯಾಲಯವೊಂದು ಮಹಿಳೆಯ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಅನೂರ್ಜಿತಗೊಳಿಸಿದೆ.

38 ವರ್ಷದ ನಿರೋಶ್‌ ಅಬ್ಬಾಸಿ ಅವರ ಪ್ರಕರಣ ಇದಾಗಿದೆ. ಅಬ್ಬಾಸಿ ಅವರ ಮೊದಲ ಪತಿ 2015ರಲ್ಲಿ ಮೃತಪಟ್ಟಿದ್ದರು. ಬಳಿಕ ಅವರು 2022ರಲ್ಲಿ ಮೊಹಮದ್‌ ಅಬಿದ್‌ ಖಾನ್‌ ಅವರನ್ನು ವಿವಾಹವಾಗಿದ್ದರು. ಮಕ್ಕಳನ್ನು ಹೊಸ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಸುವ ವಿಚಾರ ಸೇರಿದಂತೆ ಹಲವು ವಿಷಯಗಳಲ್ಲಿ ದಂಪತಿಗಳ ನಡುವೆ ವಿವಾದ ಉಂಟಾಗಿತ್ತು.

ಈ ನಡುವೆ, ಪತಿ 2021ರ ಆಗಸ್ಟ್‌ 31, ಸೆಪ್ಟೆಂಬರ್‌ 30 ಹಾಗೂ ಅಕ್ಟೋಬರ್‌ 30ರಂದು ತ್ರಿವಳಿ ತಲಾಖ್‌ ನೀಡಿದ್ದರು ಎಂದು ಅಬ್ಬಾಸಿ ಆರೋಪಿಸಿದ್ದರು. ಅಲ್ಲದೆ, ಪತಿ ಹಾಗೂ ಅತ್ತೆ-ಮಾವಂದಿರು ಕಿರುಕುಳ ಮತ್ತು ಕ್ರೌರ್ಯ ಎಸಗಿದ್ದಾರೆ ಎಂದು ಆರೋಪಿಸಿ 2021ರ ಅಕ್ಟೋಬರ್‌ 7ರಂದು ದೂರು ದಾಖಲಿಸಿದ್ದರು. ನವೆಂಬರ್‌ 1ರಂದು ಎಫ್‌ಐಆರ್‌ ದಾಖಲಾಗಿತ್ತು.

ಈ ವಿವಾದಗಳ ನಡುವೆಯೇ ರಾಯ್‌ಪುರ ಶರಿಯಾ ನ್ಯಾಯಾಲಯವು 2022ರ ಜನವರಿ 18ರಂದು ಅಬ್ಬಾಸಿ ಅವರು ಪತಿಯಿಂದ ವಿಚ್ಛೇದನ ಪಡೆದಿದ್ದಾರೆ ಎಂದು ಘೋಷಿಸಿ ಆದೇಶ ಹೊರಡಿಸಿತ್ತು.

ಧಾರ್ಮಿಕ ಸಂಸ್ಥೆಗಳಿಗೆ ಸೀಮಿತ ಅಧಿಕಾರ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತೇಂದ್ರ ಕಿಶೋರ್‌ ಪ್ರಸಾದ್‌ ನೇತೃತ್ವದ ಹೈಕೋರ್ಟ್‌ ಪೀಠವು, ದಾರುಲ್‌ ಖಾಜಾ ಅಥವಾ ಇಂತಹ ಖಾಸಗಿ ಧಾರ್ಮಿಕ ಸಂಸ್ಥೆಗಳು ಕಾನೂನುಬದ್ಧವಾಗಿ ಸ್ಥಾಪಿತ ನ್ಯಾಯಾಲಯಗಳಲ್ಲ ಎಂದು ಸ್ಪಷ್ಟಪಡಿಸಿತು.ಇಂತಹ ಸಂಸ್ಥೆಗಳು ಧಾರ್ಮಿಕ ದೃಷ್ಟಿಕೋನ, ಅಭಿಪ್ರಾಯ ಅಥವಾ ಸಲಹೆಗಳನ್ನು ನೀಡಬಹುದಾದರೂ, ತಮ್ಮ ಆದೇಶಗಳ ಮೂಲಕ ವ್ಯಕ್ತಿಯ ಕಾನೂನುಬದ್ಧ ಹಕ್ಕುಗಳು, ವೈವಾಹಿಕ ಸ್ಥಿತಿ ಅಥವಾ ಕಾನೂನುಬದ್ಧ ಬಾಧ್ಯತೆಗಳಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ವೈವಾಹಿಕ ವಿವಾದಗಳು, ವಿಚ್ಛೇದನ ಹಾಗೂ ಇತರ ವೈವಾಹಿಕ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಬದ್ಧ ನಿರ್ಣಯಗಳನ್ನು ಸಮರ್ಥ ನ್ಯಾಯಾಂಗ ಅಥವಾ ಕಾನೂನುಬದ್ಧ ಪ್ರಕ್ರಿಯೆಯ ಮೂಲಕವೇ ಕೈಗೊಳ್ಳಬೇಕು. ಖಾಸಗಿ ಧಾರ್ಮಿಕ ಸಂಸ್ಥೆಗಳು ಇಂತಹ ನಿರ್ಣಯಗಳನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಆಧುನಿಕ ಕಾನೂನು ವ್ಯವಸ್ಥೆಯಲ್ಲಿ ಖಾಸಗಿ ಧಾರ್ಮಿಕ ಸಂಸ್ಥೆಗಳ ಅಧಿಕಾರದ ಮಿತಿಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಈ ತೀರ್ಪು, ವೈವಾಹಿಕ ಹಕ್ಕುಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ಸಂದೇಶ ನೀಡಿದೆ.

RELATED ARTICLES
spot_img

Latest News