ಬೆಂಗಳೂರು,ಮೇ24-ಕಳೆದ ಎರಡು ದಿನಗಳಿಂದ ಇಳಿಮುಖವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತವಿಲ್ಲದೆ ಸ್ಥಿರತೆ ಕಂಡುಬಂದಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಬಿಕ್ಕಟ್ಟಿನ ನಂತರ ಚಿನ್ನ ಮತ್ತು ಬೆಳ್ಳಿದರಗಳು ಕುಸಿತದಿಂದ ತುಸು ಏರಿಕೆ ಕಂಡಿದ್ದವು. ಆದರೆ, ಮತ್ತೆ ಇಳಿಮುಖದತ್ತ ಸಾಗುತ್ತಿರುವುದು ಆಭರಣ ಪ್ರಿಯರಿಗೆ ತುಸು ಸಮಾಧಾನ ತಂದಿದೆ. ಆದರೆ, ಹೂಡಿಕೆದಾರರು ಮಾತ್ರ ಹಿಂದೆ-ಮುಂದೆ ನೋಡುವಂತಾಗಿದೆ.
ಮೇ 19ರಿಂದ ನಿರಂತರ ಏರಿಕೆಯಲ್ಲಿದ್ದ ಚಿನ್ನದ ದರವು ಮೇ 22 ಮತ್ತು 23 ರಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ, ಇಂದು ಯಾವುದೇ ಏರಿಳಿತವಿಲ್ಲದೆ ಸ್ಥಿರವಾಗಿದೆ. ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಪ್ರಸ್ತುತ 24 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 15,906 ರೂ., 22 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 14,580 ರೂ. ಇದ್ದು, 18ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 11,929 ರೂ. ನಷ್ಟಿದೆ. ನಿನ್ನೆ ಕ್ರಮವಾಗಿ 24 ಕ್ಯಾರೆಟ್ ಚಿನ್ನವು 43 ರೂ., 22 ಕ್ಯಾರೆಟ್ ಚಿನ್ನವು 40 ರೂ. ನಷ್ಟು ಒಂದು ಗ್ರಾಂಗೆ ಕಡಿಮೆಯಾಗಿತ್ತು.
ಮೇ 18ರಂದು ಏರಿಕೆಯಾಗಿದ್ದ ಬೆಳ್ಳಿ ದರವು ಮೇ 19, 20ರಂದು ಇಳಿಕೆಯಾಗಿತ್ತು. ಮತ್ತೆ ಮೇ 21ರಂದು ಒಂದು ಕೆ.ಜಿ. ಬೆಳ್ಳಿಗೆ ಐದು ಸಾವಿರ ರೂ. ಏರಿಕೆಯಾಗಿ 2.80 ಲಕ್ಷದಿಂದ 2.85 ಲಕ್ಷ ರೂ.ಗೆ ಹೆಚ್ಚಳವಾಗಿತ್ತು. ಮೇ 22ರಿಂದ ಏರಿಳಿತವಿಲ್ಲದೆ, ಬೆಳ್ಳಿ ದರ ಸ್ಥಿರವಾಗಿದೆ. ಪ್ಲಾಟಿನಮ್ ಆಭರಣಗಳ ದರದಲ್ಲೂ ಸ್ಥಿರತೆ ಮುಂದುವರೆದಿದೆ. ನಾಳೆ ಚಿನಿವಾರಪೇಟೆಯಲ್ಲಿ ಇದೇ ಪರಿಸ್ಥಿತಿ ಚಿನ್ನ ಮತ್ತು ಬೆಳ್ಳಿ ದರಲ್ಲಿ ಮುಂದುವರೆಯಲಿದೆಯೋ? ಅಥವಾ ಏರಿಳಿತವಾಗಲಿದೆಯೆ? ಎಂಬುದನ್ನು ಕಾದು ನೋಡಬೇಕು.
ಜಾಗತಿಕ ಮಟ್ಟದಲ್ಲಿ ಉಂಟಾಗುವ ವಿದ್ಯಮಾನಗಳ ಪರಿಣಾಮವು ಚಿನಿವಾರಪೇಟೆಯ ಮೇಲಾಗುವುದರಿಂದ ಮಾರುಕಟ್ಟೆಯ ದರಗಳಲ್ಲಿ ಆಗಾಗ್ಗೆ ಏರಿಳಿತಗಳು ಕಂಡುಬರುತ್ತವೆ. ಆದರೆ, ಈ ಹಿಂದಿನಂತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ವಿರಳ ಎಂಬುದು ಚಿನ್ನಾಭರಣಗಳ ವರ್ತಕರ ಅಭಿಪ್ರಾಯವಾಗಿದೆ.
