ನವದೆಹಲಿ,ಆ.9-ದೇಶದ ಮಧ್ಯಭಾಗದಲ್ಲಿ ಮುಂಗಾರು ಚಟುವಟಿಕೆ ಮತ್ತಷ್ಟು ಸಕ್ರಿಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಮಧ್ಯಪ್ರದೇಶ, ಛತ್ತೀಸ್ಗಢ, ವಿದರ್ಭ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ವಿಸ್ತತ ಮುನ್ಸೂಚನೆಯ ಪ್ರಕಾರ, ಆಗಸ್ಟ್ ಮೊದಲಾರ್ಧದಲ್ಲಿ ಮಧ್ಯ ಭಾರತದಲ್ಲಿ ಸಾಮಾನ್ಯದಿಂದ ಹೆಚ್ಚಿನ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ.
ಆಗಸ್ಟ್ 6-12ರ ಅವಧಿಯಲ್ಲಿ ಮಧ್ಯ ಭಾರತದಲ್ಲಿ ವ್ಯಾಪಕ ಮಳೆಯ ಜೊತೆಗೆ ಕೆಲವೆಡೆ ಭಾರೀ ಅಥವಾ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುವ ವಾಯುಮಂಡಲದ ಚಕ್ರವಾತೀಯ ಪರಿಚಲನೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಕಡಿಮೆ ಒತ್ತಡದ ಪ್ರದೇಶಗಳು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಾ ಛತ್ತೀಸ್ಗಢ ಮತ್ತು ಮಧ್ಯ ಭಾರತದತ್ತ ಪ್ರಭಾವ ಬೀರುವ ಸಾಧ್ಯತೆ ಇದೆ. ಆಗಸ್ಟ್ 12ರ ಸುಮಾರಿಗೆ ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಮತ್ತೊಂದು ಮೇಲಟ್ಟದ ಚಕ್ರವಾತೀಯ ಪರಿಚಲನೆ ರೂಪುಗೊಳ್ಳುವ ಸಾಧ್ಯತೆಯಿದ್ದು, ಆಗಸ್ಟ್ 14ರ ವೇಳೆಗೆ ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಆಗಸ್ಟ್ ಮಧ್ಯಭಾಗದಲ್ಲಿಯೂ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ.
ಮಧ್ಯ ಭಾರತದಲ್ಲಿ ಇಂತಹ ಸಕ್ರಿಯ ಮುಂಗಾರು ಪರಿಸ್ಥಿತಿ ಇದೇ ಮೊದಲಲ್ಲ. ಜುಲೈ 30ರಂದು ಛತ್ತೀಸ್ಗಢದ ಮಧ್ಯಭಾಗ ಮತ್ತು ಉತ್ತರ ಒಳನಾಡು ಒಡಿಶಾ ಪ್ರದೇಶದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸಿ ವಿದರ್ಭ ಮತ್ತು ಆಗ್ನೇಯ ಮಧ್ಯಪ್ರದೇಶದತ್ತ ಸಾಗಿತ್ತು. ಈ ವ್ಯವಸ್ಥೆಯ ಪರಿಣಾಮವಾಗಿ ಜುಲೈ 30ರಂದು ಛತ್ತೀಸ್ಗಢದಲ್ಲಿ ಪ್ರತ್ಯೇಕವಾಗಿ ಅತ್ಯಂತ ಭಾರಿ ಮಳೆಯಾಗಿದ್ದು, ಜುಲೈ 31 ಮತ್ತು ಆಗಸ್ಟ್ 1ರಂದು ಮಧ್ಯ ಮಹಾರಾಷ್ಟ್ರದಲ್ಲಿ, ಜುಲೈ 31ರಂದು ವಿದರ್ಭ ಮತ್ತು ಮರಾಠವಾಡದಲ್ಲಿ ಅತ್ಯಂತ ಭಾರೀ ಮಳೆಯಾಗಿತ್ತು. ಪಶ್ಚಿಮ ಮತ್ತು ಪೂರ್ವ ಮಧ್ಯಪ್ರದೇಶದಲ್ಲಿಯೂ ಭಾರೀ ಮಳೆಯಾಗಿತ್ತು. ಅದೇ ವ್ಯವಸ್ಥೆಯು ಮುಂದುವರಿದು ಆಗಸ್ಟ್ 1ರಂದು ಗುಜರಾತ್ನ ಅಂಬಿಕಾ ಪ್ರದೇಶದಲ್ಲಿ 61 ಸೆಂ.ಮೀ. ಮಳೆ ದಾಖಲಾಗುವಂತಹ ಅತ್ಯಂತ ತೀವ್ರ ಮಳೆಯನ್ನೂ ಉಂಟು ಮಾಡಿತ್ತು.
ಜೂನ್ 1ರಿಂದ ಆಗಸ್ಟ್ 5ರವರೆಗೆ ದೇಶದ ಒಟ್ಟಾರೆ ಮಳೆ ದೀರ್ಘಾವಧಿ ಸರಾಸರಿಗಿಂತ ಶೇ.11% ಕಡಿಮೆ ಇತ್ತು. ಆದರೆ ಮಧ್ಯ ಭಾರತದಲ್ಲಿ ಇದೇ ಅವಧಿಯಲ್ಲಿ ಮಳೆ ಶೇ.2 ಹೆಚ್ಚಾಗಿತ್ತು. ಜುಲೈ 30ರಿಂದ ಆಗಸ್ಟ್ 5ರವರೆಗಿನ ಒಂದು ವಾರದಲ್ಲಿ ಮಧ್ಯ ಭಾರತದಲ್ಲಿ ದೀರ್ಘಾವಧಿ ಸರಾಸರಿಗಿಂತ 14% ಹೆಚ್ಚು ಮಳೆ ದಾಖಲಾಗಿತ್ತು. ಎಲ್ ನಿನೊ ಕೂಡ ಗಮನದಲ್ಲಿದೆ: ಈ ವರ್ಷದ ಮುಂಗಾರು ಋತುವಿನ ದೀರ್ಘಾವಧಿಯ ಚಿತ್ರಣದ ಮೇಲೆ ಪೆಸಿಫಿಕ್ ಸಾಗರದಲ್ಲಿ ಬೆಳೆಯುತ್ತಿರುವ ಎಲ್ ನಿನೊ ಪರಿಸ್ಥಿತಿಯೂ ಪ್ರಮುಖ ಅಂಶವಾಗಿದೆ. ಒಆಯ ಆಗಸ್ಟ್ 6ರ ವರದಿ ಪ್ರಕಾರ, ಸಮಭಾಜಕ ಪೆಸಿಫಿಕ್ನಲ್ಲಿ ಪ್ರಸ್ತುತ ಮಧ್ಯಮ ಮಟ್ಟದ ಎಲ್ ನಿನೊ ಪರಿಸ್ಥಿತಿ ಇದೆ ಮತ್ತು ಉಳಿದ ಮುಂಗಾರು ಅವಧಿಯಲ್ಲಿ ಅದು ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ.
ಐಎಂಡಿ ಎರಡನೇ ವಾರದ ಮುನ್ಸೂಚನೆಯ ಪ್ರಕಾರ, ಆಗಸ್ಟ್ 13-19ರ ಅವಧಿಯಲ್ಲಿ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮಳೆಯ ಪ್ರಮಾಣ ಸಾಮಾನ್ಯದಿಂದ ಹೆಚ್ಚಿನ ಮಟ್ಟದಲ್ಲಿರಬಹುದು. ಅದೇ ಸಮಯದಲ್ಲಿ ಪಶ್ಚಿಮ ಕರಾವಳಿ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ವ್ಯಾಪಕ ಮಳೆಯ ಸಾಧ್ಯತೆ ಇದೆ.
