Homeರಾಷ್ಟ್ರೀಯರಕ್ಷಣಾ ಮಾಹಿತಿ ಸೋರಿಕೆ ಪ್ರಕರಣ : ಹನಿಟ್ರ್ಯಾಪ್‌ ಬಲೆಗೆ ಬಿದ್ದ ಐಎಎಫ್‌ ವಿಂಗ್‌ ಕಮಾಂಡರ್‌ ಬಂಧನ

ರಕ್ಷಣಾ ಮಾಹಿತಿ ಸೋರಿಕೆ ಪ್ರಕರಣ : ಹನಿಟ್ರ್ಯಾಪ್‌ ಬಲೆಗೆ ಬಿದ್ದ ಐಎಎಫ್‌ ವಿಂಗ್‌ ಕಮಾಂಡರ್‌ ಬಂಧನ

ನವದೆಹಲಿ,ಆ.8-ಭಾರತೀಯ ವಾಯುಪಡೆಯ ರಕ್ಷಣಾ ಸಂಬಂಧಿತ ಅತ್ಯಂತ ಸೂಕ್ಷ್ಮ ಹಾಗೂ ಕಾರ್ಯತಂತ್ರದ ಮಾಹಿತಿ ಸೋರಿಕೆ ಮಾಡಿದ್ದ ಆರೋಪದ ಮೇಲೆ ವಿಂಗ್‌ ಕಮಾಂಡರ್‌ ಹುದ್ದೆಯ ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದ್ದು, ಪ್ರಸ್ತುತ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧಿತ ವಿಂಗ್‌ ಕಮಾಂಡರ್‌ ಫೀಲ್‌್ಡ ಯೂನಿಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಐಎಎಫ್‌ನ ಗುಪ್ತಚರ ವಿಭಾಗವು ದೆಹಲಿ ಪೊಲೀಸರಿಗೆ ನೀಡಿದ ನಿರ್ದಿಷ್ಟ ಸುಳಿವಿನ ಮೇರೆಗೆ ಮೇ 31ರ ರಾತ್ರಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ಪ್ರಕರಣವು ಕೇವಲ ವ್ಯಕ್ತಿಗತ ಕೃತ್ಯವಲ್ಲದೆ, ಕಾರ್ಯತಂತ್ರದ ಮಿಲಿಟರಿ ಗುಪ್ತಚರವನ್ನು ಗುರಿಯಾಗಿಸಿಕೊಂಡಿರುವ ದೊಡ್ಡ ಮಟ್ಟದ ಅಂತರರಾಷ್ಟ್ರೀಯ ಬೇಹುಗಾರಿಕೆ ಜಾಲದ ಭಾಗವಾಗಿರಬಹುದು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಗಳು ಶಂಕಿಸಿದ್ದಾರೆ.

ಹನಿಟ್ರ್ಯಾಪ್‌ ಬಲೆಗೆ ಬಿದ್ದಿದ್ದು ಹೇಗೆ?
ತನಿಖೆಯ ಪ್ರಕಾರ, ವೈಯಕ್ತಿಕ ಜೀವನದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದ ಅಧಿಕಾರಿಯನ್ನು ಗುರಿಯಾಗಿಸಲು ಸೋಶಿಯಲ್‌ ಮೀಡಿಯಾ ಮೂಲಕ ಮಹಿಳೆಯೊಬ್ಬರು ಸಂಪರ್ಕ ಸಾಧಿಸಿದ್ದಾರೆ.
ಚಾಟ್‌ಗಳು ಮತ್ತು ವಿಡಿಯೋ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಅಧಿಕಾರಿಯ ವಿಶ್ವಾಸ ಗಳಿಸಲಾಗಿದೆ. ಸೇನಾ ಪಡೆಗಳ ಚಲನವಲನಗಳು, ನಿಯೋಜನೆಗಳು, ಫೋಟೋಗಳು ಮತ್ತು ವೀಡಿಯೊಗಳಂತಹ ಸೂಕ್ಷ್ಮ ದತ್ತಾಂಶಗಳನ್ನು ಡಿಜಿಟಲ್‌ ಮಾಧ್ಯಮದ ಮೂಲಕ ಮಹಿಳೆಗೆ ವರ್ಗಾಯಿಸಲಾಗಿದೆ.

ಕೇವಲ ಅಧಿಕಾರಿಯಷ್ಟೇ ಅಲ್ಲದೆ, ಮತ್ತೊಬ್ಬ ಸಹೋದ್ಯೋಗಿಯ ಮೊಬೈಲ್‌ ಫೋನ್‌ನಲ್ಲಿ ನಿರ್ದಿಷ್ಟ ಅಪ್ಲಿಕೇಶನ್‌ ಒಂದನ್ನು ಇನ್‌ಸ್ಟಾಲ್‌ ಮಾಡಲು ಸೂಚಿಸಲಾಗಿದೆ. ಇದು ಡೇಟಾ ಕದಿಯಲು, ಲೊಕೇಶನ್‌ ಟ್ರ್ಯಾಕ್‌ ಮಾಡಲು ಹಾಗೂ ಸಂವಹನಗಳನ್ನು ಪ್ರತಿಬಂಧಿಸಲು ಬಳಸುವ ಸ್ಪೈವೇರ್‌ ಅಥವಾ ರಿಮೋಟ್‌-ಆಕ್ಸೆಸ್‌‍ ಮಾಲ್‌ವೇರ್‌ ಆಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ. ಪಾಕ್‌ ಮೂಲದ ಹ್ಯಾಂಡ್‌ಲರ್‌ಗಳ ನಂಟು: ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಕ್ಕೆ ಬಂದ ಆ ಮಹಿಳೆ, ತೆರೆಮರೆಯಲ್ಲಿ ಪಾಕಿಸ್ತಾನ ಮೂಲದ ಹ್ಯಾಂಡ್‌ಲರ್‌ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಳು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.

ಆರೋಪಿ ಎಷ್ಟು ಪ್ರಮಾಣದ ಸೂಕ್ಷ್ಮ ಮಾಹಿತಿಯನ್ನು ಹೊರಹಾಕಿದ್ದಾನೆ ಮತ್ತು ಯಾರೊಂದಿಗೆ ಹಂಚಿಕೊಂಡಿದ್ದಾನೆ ಎಂಬುದರ ಕುರಿತು ಪೊಲೀಸರು ಡಿಜಿಟಲ್‌ ಹಾದಿಯನ್ನು ಆಧರಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಐಎಎಫ್‌ ಸ್ಪಷ್ಟನೆ: ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು, ಸಂಬಂಧಿತ ಅಧಿಕಾರಿಯ ಚಲನವಲನಗಳು ಮೊದಲೇ ಪಡೆಯ ಗಮನದಲ್ಲಿದ್ದು, ಆತನ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು. ನಂತರ ದೆಹಲಿ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES
spot_img

Latest News