ಬೆಂಗಳೂರು,ನ.8- ಒಂದೇ ಕುಟುಂಬದ ಏಳು ಮಂದಿಯ ಬರ್ಬರ ಹತ್ಯೆ ಪ್ರಕರಣದಲ್ಲಿ ರಾಜಾಜಿನಗರ ಠಾಣೆ ಪೊಲೀಸರು ಮತ್ತೆರಡು ಶವಗಳನ್ನು ಪತ್ತೆಹಚ್ಚಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ದಿವ್ಯ ದಂಪತಿಯ ಮೃತದೇಹಗಳು ಇವೆ ಎಂದು ಪೊಲೀಸರು ಶಂಕಿಸಿದ್ದು, ಆರೋಪಿ ಇಂದುಶೇಖರನನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ.
ಕುಟುಂಬದ ಸಮುಖದಲ್ಲಿ ಮೃತದೇಹಗಳನ್ನು ಹೊರತೆಗೆದು ಗುರುತಿಸಿದ ಮೇಲೆ ಅವು ಶಿವಕುಮಾರ್ ಮತ್ತು ದಿವ್ಯಾರ ಶವ ಎಂದು ನಿಖರವಾಗಿ ತಿಳಿದುಬರಲಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಈ ಭೀಕರ ಘಟನೆಯಲ್ಲಿ ಈತನಕ ಐದು ಶವಗಳು ಪತ್ತೆಯಾಗಿವೆ. ಉಳಿದ ಎರಡು ಶವಗಳಿಗಾಗಿ
ಶಿರಾಡಿಘಾಟ್‌ಗೆ ತೆರಳಿರುವ ವಿಶೇಷ ತಂಡವೊಂದು ಅಲ್ಲಿ ಶೋಧ ನಡೆಸುತ್ತಿದೆ. ನಿನ್ನೆ ಸೇಲಂನ ಕಾಡಿನಲ್ಲಿ ಆರೋಪಿಯ ಪತ್ನಿ ಸುನೀತ ಮತ್ತು ಅತ್ತೆ ರೂಪವತಿ, ಶವಗಳು ದೊರೆತಿದ್ದು, ಅವುಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ನಂತರ ಶವಗಳನ್ನು ನಗರಕ್ಕೆ ತರಲಾಗುವುದು. ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಶವ ದೊರೆತಿದ್ದು, ಈಗಾಗಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಆರೋಪಿ ಇಂದುಶೇಖರ ಕೇವಲ 15 ದಿನಗಳ ಅವಧಿಯಲ್ಲಿ ಪತ್ನಿ ಸೇರಿದಂತೆ ಏಳು ಮಂದಿ ಸಂಬಂಧಿಕರನ್ನು ಭೀಕರವಾಗಿ ಕೊಲೆ ಮಾಡಿ ಶವಗಳನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ನಂದಿಬೆಟ್ಟದ ತಪ್ಪಲು, ಸೇಡಂನ ಕಾಡು, ಚಾಮುಂಡಿ ಬೆಟ್ಟದ ತಪ್ಪಲು, ಶಿರಾಡಿಘಾಟ್‌ನಲ್ಲಿ ಎಸೆದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ವಶದಲ್ಲಿರುವ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
