Homeರಾಜ್ಯಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮುಧೋಳದಲ್ಲಿ ಭುಗಿಲೆದ್ದ ಹೋರಾಟ

ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮುಧೋಳದಲ್ಲಿ ಭುಗಿಲೆದ್ದ ಹೋರಾಟ

ಬೆಂಗಳೂರು, ನ.8- ಬೆಳಗಾವಿ ಹಾಗೂ ಮತ್ತಿತರ ಕಡೆಗಳಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಮುಕ್ತಾಯಗೊಂಡ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹೋರಾಟ ಮತ್ತೆ ಶುರುವಾಗಿದೆ.

ಪ್ರತಿ ಟನ್‌ ಕಬ್ಬಿಗೆ 4,250 ರೂ. ದರ ನೀಡಲೇ ಬೇಕು ಎಂದು ಆಗ್ರಹಿಸಿ, ಕಬ್ಬು ಬೆಳೆಗಾರರು ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.ಪ್ರತಿ ಮನೆಯಿಂದಲೂ ತಲಾ ಒಬ್ಬರು ಹೋರಾಟಕ್ಕೆ ಆಗಮಿಸುವಂತೆ ರೈತ ಮುಖಂಡರು ಕರೆ ನೀಡಿದ್ದಾರೆ. 4,250 ರೂ.ಗಳ ದರ ಪಡೆಯದೇ ನಾವು ವಾಪಸ್‌‍ ಹೋಗುವುದಿಲ್ಲ ಎಂಬ ಪಟ್ಟನ್ನು ರೈತರು ಹಿಡಿದಿದ್ದು, ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಒಪ್ಪಂದಗಳನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ.

ಕಬ್ಬು ಬೆಲೆ ನಿಗದಿ ಒಂದು ಜಿಲ್ಲೆಗೆ ಸೀಮಿತವಾದ ವಿಷಯವಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಜಿಲ್ಲಾಧಿಕಾರಿಗಳ ಆದೇಶ ರಾಜ್ಯಾದ್ಯಂತ ಅನ್ವಯಗೊಳ್ಳುವುದಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಆದೇಶ ಹೊರಡಿಸಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.

ಕಳೆದ ವರ್ಷ ಭರವಸೆ ನೀಡಲಾದ 300 ರೂಗಳನ್ನು ಈವರೆಗೂ ಪಾವತಿಸಿಲ್ಲ. ಅದನ್ನು ಬಿಡುಗಡೆ ಮಾಡಬೇಕು. ಬೆಳಗಾವಿಯಲ್ಲಾದ ಒಪ್ಪಂದದಲ್ಲಿ ಕೆಲವು ಲೋಪಗಳಾಗಿವೆ. ಎಸ್‌‍ಎಪಿ, ಎಫ್‌ಆರ್‌ಪಿ, ಎಂಎಸ್‌‍ಪಿಗಳೆಂದರೇನು? ಅವುಗಳ ಕಾನೂನು ಮಿತಿಗಳ ಬಗ್ಗೆ ನಮಗೆ ಅರಿವಿದೆ. ಸರ್ಕಾರ ಕಬ್ಬು ಬೆಳೆಗಾರರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಕಳೆದ 15 ವರ್ಷಗಳಿಂದಲೂ ನ್ಯಾಯೋಚಿತ ಬೆಲೆಗಾಗಿ ರೈತರು ಪ್ರತಿನಿತ್ಯ ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ರಾಜಕೀಯ ದಾಳಕ್ಕೆ ಸಿಲುಕಿ ಹೋರಾಟಗಳು ವ್ಯರ್ಥವಾಗುತ್ತವೆ ಎಂದು ಅವರು ಆರೋಪಿಸಿದರು.

ಬೆಳಗಾವಿ ಸೇರಿದಂತೆ ವಿವಿಧೆಡೆಗಳಲ್ಲಿ 20 ದಿನಗಳಿಂದಲೂ ನಡೆದಿದ್ದ ಪ್ರತಿಭಟನೆ ಸಚಿವ ಸತೀಶ್‌ ಜಾರಕಿಹೊಳಿಯವರ ಮಧ್ಯಸ್ಥಿಕೆಯಿಂದ ತಣ್ಣಗಾಗಿತ್ತು. 2 ದಿನಗಳ ಹಿಂದೆ ಹೋರಾಟವನ್ನು ಕೈಬಿಟ್ಟ ರೈತರು, ಕಬ್ಬು ಅರೆಯಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು.ಈ ನಡುವೆ ಬಾಗಲಕೋಟೆ ಜಿಲ್ಲೆಯ ರೈತರು ಪ್ರತಿಭಟನೆಗೆ ಮುಂದಾಗಿರುವುದು ಹೊಸ ತಲೆ ನೋವು ತಂದಿಟ್ಟಿದೆ.

RELATED ARTICLES

Latest News