Homeರಾಜ್ಯಎಥೆನಾಲ್‌ ಮಿಶ್ರಣ : ರಾಜ್ಯ ಸರ್ಕಾರದ ಹಾಗೂ ತೈಲ ಕಂಪನಿಗಳ ನಡುವೆ ಸಂಘರ್ಷ..?

ಎಥೆನಾಲ್‌ ಮಿಶ್ರಣ : ರಾಜ್ಯ ಸರ್ಕಾರದ ಹಾಗೂ ತೈಲ ಕಂಪನಿಗಳ ನಡುವೆ ಸಂಘರ್ಷ..?

ಬೆಂಗಳೂರು, ನ.8- ಎಥೆನಾಲ್‌ ಮಿಶ್ರಣದ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ತೈಲ ಕಂಪನಿಗಳ ಜೊತೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗುತ್ತಿದೆ.ಪೆಟ್ರೋಲ್‌ ಬಂಕ್‌ಗಳಲ್ಲಿ ತಪಾಸಣೆ ನಡೆಸಿ, ಶೇ. 30ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್‌ ಅನ್ನು ಮಿಶ್ರಣ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಿಜ್ವಾನ್‌ ಅರ್ಷದ್‌ ಆರೋಪಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಅದನ್ನು ಅನುಮೋದಿಸಿದ್ದಾರೆ. ನಾಳೆ ಪತ್ರಿಕಾಗೋಷ್ಠಿಯಲ್ಲಿ ರಿಜ್ವಾನ್‌ ಅರ್ಷದ್‌ ಮತ್ತಷ್ಟು ಅಂಶಗಳನ್ನು ಬಹಿರಂಗಗೊಳಿಸಲಿದ್ದಾರೆ.
ಎಥೆನಾಲ್‌ ಮಿಶ್ರಣ ತೈಲ ಕಂಪನಿಗಳಿಂದಲೇ ನಡೆಯುತ್ತಿದೆ. ಪೆಟ್ರೋಲ್‌, ಡೀಸೆಲ್‌ ಸರಬರಾಜಾಗುವ ಸ್ಥಳದಿಂದಲೇ ಎಥೆನಾಲ್‌ ಮಿಶ್ರಣ ಮಾಡಿ ಪೂರೈಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ.

ಆರೋಪ ಕೇಳಿ ಬಂದ ತಕ್ಷಣವೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ, ಹಿಂದೂಸ್ಥಾನ್‌ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಸಂಸ್ಥೆಗಳು ಏಕರೂಪದ ಸ್ಪಷ್ಟನೆಯನ್ನು ತಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿವೆ.

ಕರ್ನಾಟಕದ ಕೆಲ ಔಟ್‌ಲೆಟ್‌ಗಳಲ್ಲಿ ಪರೀಕ್ಷೆಗೊಳಪಡಿಸಿದಾಗ ಶೇ. 26 ರಿಂದ 31 ರಷ್ಟು ಎಥೆನಾಲ್‌ ಮಿಶ್ರಣವಾಗುತ್ತಿದೆ ಎಂಬ ಆರೋಪ ಆಧಾರರಹಿತ. ದೇಶಾದ್ಯಂತ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 893 ಬಂಕ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಶೇ. 19 ರಿಂದ 21 ರಷ್ಟು ಪ್ರಮಾಣಿತ ಮಿತಿಯಲ್ಲಿ ಎಥೆನಾಲ್‌ ಮಿಶ್ರಣವಾಗಿರುವುದು ಕಂಡು ಬಂದಿದೆ. ಮೂರು ತೈಲ ಕಂಪನಿಗಳು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಗುಣಮಟ್ಟ ಪರಿಶೀಲನೆಗೆ ಸಿದ್ಧ ಇರುವುದಾಗಿ ತಿಳಿಸಿವೆ.

ಏಕರೂಪದಲ್ಲಿರುವ ಈ ಸ್ಪಷ್ಟನೆಗೆ ವ್ಯಂಗ್ಯವಾಡಿರುವ ಸಚಿವ ರಿಜ್ವಾನ್‌ ಅರ್ಷದ್‌ ಕಟ್‌-ಪೇಸ್ಟ್‌ ಪ್ರತಿಕ್ರಿಯೆಯನ್ನು ಗಮನಿಸಿದ್ದೇವೆ. ದೀಪಾವಳಿಯ ಸಂದರ್ಭದಲ್ಲಿ ವಾರಾಂತ್ಯದ ಸಂಭ್ರಮವನ್ನು ಹಾಳು ಮಾಡಲು ನಮಗೆ ಮನಸ್ಸಿಲ್ಲ. ಸೋಮವಾರ ಸುದೀರ್ಘ ವಿವರಣೆಯನ್ನು ನಾವು ದೇಶಕ್ಕೆ ನೀಡುತ್ತೇವೆ. ಅಲ್ಲಿಯವರೆಗೂ ಹಬ್ಬವನ್ನು ಸಂಭ್ರಮಿಸಿ ಎಂದು ಹೇಳಿದ್ದಾರೆ.

ನಾಳೆ ನಡೆಯುವ ಪತ್ರಿಕಾಗೋಷ್ಠಿ ತೀವ್ರ ಕುತೂಹಲ ಕೆರಳಿಸಿದೆ. ಪೆಟ್ರೋಲ್‌, ಡೀಸೆಲ್‌ ಜೊತೆ ಶೇ. 20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್‌‍ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿತ್ತು. ಆದರೂ ಕೇಂದ್ರ ಸರ್ಕಾರ ಕಾನೂನಿನ ತಿದ್ದುಪಡಿಗೆ ತಂದು ವಿರೋಧಗಳನ್ನು ಲೆಕ್ಕಿಸದೇ ಎಥೆನಾಲ್‌ ಮಿಶ್ರಣವನ್ನು ಮುಂದುವರೆಸಿದೆ. ಆದರೆ ಶೇ. 20ರ ಮಿತಿಯ ಬದಲಾಗಿ ಶೇ.30ರಷ್ಟು ಎಥೆನಾಲ್‌ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಎಥೆನಾಲ್‌ ಮಿಶ್ರಣದಿಂದ ವಾಹನಗಳ ಎಂಜಿನ್‌ ಹಾಳಾಗುತ್ತಿದೆ. ಮೈಲೇಜ್‌ ಕಡಿಮೆಯಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿವೆ. ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಕಂಪನಿಗಳು ಹೆಚ್ಚಿನ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಎಥೆನಾಲ್‌ ಮಿಶ್ರಣವನ್ನು ಹೆಚ್ಚಿಸಿದೆ ಎಂಬ ಆರೋಪ ತೀವ್ರವಾಗಿವೆೆ.

RELATED ARTICLES

Latest News