Homeರಾಜ್ಯನರ ರಾಕ್ಷಸ ಇಂದುಶೇಖರ್‌ ಸಹೋದರನೂ ಡಬಲ್‌ ಮರ್ಡರ್‌ ಆರೋಪಿ

ನರ ರಾಕ್ಷಸ ಇಂದುಶೇಖರ್‌ ಸಹೋದರನೂ ಡಬಲ್‌ ಮರ್ಡರ್‌ ಆರೋಪಿ

ಬೆಂಗಳೂರು, ನ.8- ಆಸ್ತಿ ಆಸೆಗಾಗಿ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಿ ರಕ್ತ ಚರಿತ್ರೆ ಸೃಷ್ಟಿಸಿರುವ ನರಹಂತಕ ಇಂದು ಶೇಖರ್‌ ಅವರ ಸಹೋದರ ಕೂಡ ಡಬಲ್‌ ಮರ್ಡರ್‌ ಆರೋಪಿ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

ನರ ರಾಕ್ಷಸ ಇಂದು ಶೇಖರ್‌ ಅವರ ಸಹೋದರ ಎನ್ನಲಾದ ಬೆಳತ್ತೂರು ರಮೇಶ್‌ ಎಂಬಾತನೇ ಡಬಲ್‌ ಮರ್ಡರ್‌ ಮಾಡಿ ಜೈಲು ಸೇರಿದ್ದ ಹಂತಕ ಎಂದು ಗುರುತಿಸಲಾಗಿದೆ.15 ಕೋಟಿ ರೂ.ಗಳ ಆಸ್ತಿಗಾಗಿ ಇಂದು ಶೇಖರ್‌ ಸಹೋದರ ರಮೇಶ್‌ ಇಬ್ಬರನ್ನು ಹತ್ಯೆಗೈದು ಜೈಲುಶಿಕ್ಷೆ ಅನುಭವಿಸುತ್ತಿದ್ದು ಕೆಲ ದಿನಗಳ ಹಿಂದೆ ಆತ ಕೂಡ ಜೈಲಿನಲ್ಲೇ ಕೊನೆಯುಸಿರು ಎಳೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಡುಗೋಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್‌ ಆಗಿದ್ದ ರಮೇಶ್‌ ಎಂಟು ವರ್ಷಗಳ ಹಿಂದೆ ಬೆಳತ್ತೂರು ಸಮೀಪದ 1.8 ಎಕರೆ ಜಮೀನಿಗಾಗಿ ಡಬಲ್‌ ಮರ್ಡರ್‌ ಮಾಡಿದ್ದ ಎಂದು ತಿಳಿದುಬಂದಿದೆ.ನಂಜಪ್ಪ ಎಂಬುವರು 15 ಕೋಟಿ ರೂ.ಮೌಲ್ಯದ 1.8 ಎಕರೆ ಜಮೀನು ಹೊಂದಿದ್ದರು. ವಯೋ ಸಹಜ ಕಾರಣದಿಂದ ನಂಜಪ್ಪ ಮೃತಪಟ್ಟ ನಂತರ ಅವರ ಆಸ್ತಿಯ ಮೇಲೆ ರಮೇಶ್‌ ಕಣ್ಣು ಬಿದ್ದಿತ್ತು.

ನಂಜಪ್ಪ ಅವರ ಆಸ್ತಿ ಹೊಡೆಯುವ ಉದ್ದೇಶದಿಂದ ರಮೇಶ್‌, ವೆಂಕಟರಮಣ ಎಂಬ ವ್ಯಕ್ತಿಯನ್ನು ಕರೆತಂದುದ ಆತನನ್ನೇ ನಂಜಪ್ಪ ಎಂದು ನಂಬಿಸಿ, ಜೊತೆಗೆ ನಕಲಿ ದಾಖಲೆ ಸೃಷ್ಟಿಸಿ ಡೂಪ್ಲಿಕೇಟ್‌ ವಿಲ್‌ ಮಾಡಿಸಿಕೊಂಡಿದ್ದ.

ಕೆಲ ದಿನಗಳ ನಂತರ ಕೃಷ್ಣಪ್ಪ ಎಂಬ ವ್ಯಕ್ತಿಯನ್ನು ಕರೆತಂದು ನಕಲಿ ನಂಜಪ್ಪನಾಗಿದ್ದ ವೆಂಕಟರಮಣನಿಗೆ ಭೇದಿ ಮಾತ್ರೆ ನುಂಗಿಸಿ ಭೀಕರವಾಗಿ ಕೊಲೆ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.ಕೊಲೆಯಾದ ವೆಂಕಟರಮಣ ಅಲಿಯಾಸ್‌‍ ನಕಲಿ ನಂಜಪ್ಪನ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ಸೃಷ್ಟಿಸಿ ಏನೂ ಗೊತ್ತಿಲ್ಲದವನಂತೆ ನಾಟಕವಾಡಿದ್ದ.

ನಕಲಿ ನಂಜಪ್ಪನ ಕೊಲೆ ಸಂದರ್ಭದಲ್ಲಿ ರಮೇಶ್‌ಗೆ ಸೇರಿದ ತೋಟದಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ವೆಂಕಟಸ್ವಾಮಿ ಎಂಬಾತನು ಇದ್ದ. ರಮೇಶ್‌ ಮಾಡಿಸಿದ ಕೊಲೆ ಬಗ್ಗೆ ವೆಂಕಟಸ್ವಾಮಿ ತನ್ನ ಪತ್ನಿ ಸುಧಾರಾಣಿಗೆ ತಿಳಿಸಿದ್ದ. ಕೊಲೆ ವಿಚಾರ ತಿಳಿದ ಆಕೆ ರಮೇಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆಕೆಗೂ ಬೆಂಕಿ ಇಟ್ಟ; ಸುಧಾರಾಣಿ ಎಲ್ಲಿ ತನ್ನ ಅಸಲಿ ವಿಚಾರ ಪೊಲೀಸರಿಗೆ ತಿಳಿಸಿಬಿಡುತ್ತಾರೋ ಎಂದು ಭಯಭೀತನಾಗಿದ್ದ ಕಿರಾತಕ ರಮೇಶ್‌ ಆಕೆಯ ಕೊಲೆಗೂ ಮುಹೂರ್ತ ಫಿಕ್‌್ಸ ಮಾಡೇಬಿಟ್ಟ.ಸುಧಾರಾಣಿ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭ ನೋಡಿಕೊಂಡು ರಮೇಶ್‌ ಆಕೆಯ ಮೈಮೇಲೆ ಸಿಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ನಂತರ ಆಕೆ ಆತಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕತೆ ಕಟ್ಟಿದ್ದ.

ಆದರೆ, ರಮೇಶನ ಆಟ ಪೊಲೀಸರ ಮುಂದೆ ನಡೆಯಲಿಲ್ಲ. ತನಿಖೆ ವೇಳೆ ಸುಧಾರಾಣಿ ಆತಹತ್ಯೆ ಮಾಡಿಕೊಂಡಿಲ್ಲ ಅದು ಉದ್ದೇಶಪೂರ್ವಕ ಕೊಲೆ ಎನ್ನುವುದನ್ನು ಪತ್ತೆ ಹಚ್ಚಿದ ಪೊಲೀಸರು ಕೊಲೆಗಾರ ರಮೇಶ್‌ ಹಾಗೂ ವೆಂಕಟಸ್ವಾಮಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಜೈಲಿನಲ್ಲೇ ಸಾವು; ಡಬಲ್‌ ಮರ್ಡರ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ರಮೇಶ್‌ ವರ್ತೂರು ಭಾಗದಲ್ಲಿ ಹಲವಾರು ಭೂ ಮಾಫಿಯಾ ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ನಟೋರಿಯಸ್‌‍ ರೌಡಿಯಾಗಿ ಗುರುತಿಸಿಕೊಂಡಿದ್ದ.

ಇಷ್ಟೊಂದು ಕ್ರಿಮಿನಲ್‌ ಹಿನ್ನಲೆ ಇದ್ದ ಕಾರಣ ಆತ ಜೈಲಿನಿಂದ ಹೊರ ಬರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಜೈಲಿನಲ್ಲೇ ಜೀವನ ಸಾಗಿಸುತ್ತಿದ್ದ ರಮೇಶ್‌ ಕಳೆದ 2021ರಲ್ಲಿ ಅಲ್ಲೇ ಮೃತಪಟ್ಟಿದ್ದ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಇಂದುಶೇಖರ್‌ಗೂ ಜೈಲೇ ಗತಿ;
ಅಣ್ಣ ಒಂದೂವರೆ ಕೋಟಿ ಮೌಲ್ಯದ ಆಸ್ತಿ ಆಸೆಗಾಗಿ ಡಬಲ್‌ ಮರ್ಡರ್‌ ಮಾಡಿ ಜೈಲು ಸೇರಿದ್ದರೆ ಅಣ್ಣನ ಹಾದಿಯನ್ನೇ ಹಿಡಿದು ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿರುವ ಇಂದು ಶೇಖರ್‌ ಕೂಡ ಅಣ್ಣ ರಮೇಶನಂತೆ ಜೈಲಿನಲ್ಲೇ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾನೆ.

RELATED ARTICLES

Latest News