ಬೆಂಗಳೂರು,ನ.8- ಕ್ರೈಂ ಥ್ರಿಲ್ಲರ್ ಸಿನಿಮಾ ನೋಡಿ , ಇಂಟರ್‌ನೆಟ್ ಜಾಲಾಡಿ ನರಹಂತಕ ಇಂದುಶೇಖರ್ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ್ದಾನೆ ಎಂಬುದು ಉತ್ತರ ವಿಭಾಗದ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಕಾಣೆಯಾದ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಆರೋಪಿ ಏಳು ಕೊಲೆಗಳನ್ನು ಮಾಡಿರುವುದನ್ನು ಕೇಳಿ ಶಾಕ್ ಆಗಿದೆ. ಆತ ವಿಚಾರಣೆ ವೇಳೆ ಅವರುಗಳನ್ನು ಮನೆಗೆ ಹೇಗೆ ಕರೆಸಿಕೊಂಡು, ಏಳು ಮಂದಿಯನ್ನು ಯಾವ ರೀತಿ ಕೊಲೆ ಮಾಡಿ, ಶವಗಳನ್ನು ಹೇಗೆ ಸಾಗಿಸಿದೆ ಎಂಬ ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಏಕೆ ಈ ಏಳು ಕೊಲೆಗಳನ್ನು ಮಾಡಿದೆ? ಎಂದು ಪೊಲೀಸರು ವಿಚಾರಣಾ ಸಮಯದಲ್ಲಿ ಕೇಳಿದಾಗ ಪತ್ನಿಯ ಕಿರುಕುಳ ಮತ್ತು ತನ್ನನ್ನು ತುಚ್ಛವಾಗಿ ನೋಡುತ್ತಿದ್ದುದು, ಆಕೆಯ ಪರವಾಗಿ ಅವಳ ತವರು ಮನೆಯವರು ಬೆಂಬಲವಾಗಿ ನಿಂತಿದ್ದರು, ಇದರಿಂದ ಸಿಟ್ಟಾಗಿ ತಾನು ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಹಾಗಾದರೆ ಈ ರೀತಿ ಭೀಕರ ಕೊಲೆ ಮಾಡಲು ನಿನಗೆ ಹೇಗೆ ಮನಸ್ಸು ಬಂದಿತು? ಎಂದು ಕೇಳಿದಾಗ, ನಾನು ಇಂಗ್ಲೀಷ್ ಸಸ್ಪೆನ್‌್ಸ ಮತ್ತು ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ನೋಡಿ ಪ್ರಭಾವಿತನಾಗಿದ್ದೆ. ಅಲ್ಲದೆ ಇಂಟರ್‌ನೆಟ್ ಜಾಲಾಡಿ ಕೊಲೆ ಹೇಗೆ ಮಾಡಬೇಕು, ಶವಗಳನ್ನು ಹೇಗೆ ಸಾಗಿಸಬೇಕು… ಹೀಗೆ ಮುಂತಾದ ಅಂಶಗಳನ್ನು ನೋಡಿ ತಿಳಿದುಕೊಂಡಿದ್ದೆ.
ಅದರಂತೆಯೇ ನಾನು ಮೊದಲೇ ಪ್ಲ್ಯಾನ್ ಮಾಡಿಕೊಂಡು ಕೃತ್ಯಕ್ಕೆ ಬೇಕಾದ ನಿದ್ರೆಮಾತ್ರೆ, ಹಗ್ಗ, ಚೀಲಗಳನ್ನು ತಂದಿಟ್ಟುಕೊಂಡಿದ್ದೆ. ಮೊದಲು ಪತ್ನಿಯನ್ನು ಕೊಲೆ ಮಾಡಿ, ಮಗಳ ಮೂಲಕ ಅವಳ ಅಜ್ಜಿ ಮತ್ತು ಸೋದರ ಮಾವಂದಿರು, ಅತ್ತೆಯಂದಿರುಗಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದೆ.
ನಿದ್ರೆ ಮಾತ್ರೆ ಹಾಕಿದ ಊಟವನ್ನು ಅವರು ತಿಂದ ನಂತರ ಪ್ರಜ್ಞಾಹೀನರಾದಾಗ ಮನೆಯ ಹಾಲಿನಲ್ಲಿ ಸಂಬಂಧಿಕರಿಗೆ ರುಬ್ಬುಕಲ್ಲಿನಿಂದ ಹೊಡೆದು ಕೊಲೆ ಮಾಡಿ ಶವಗಳನ್ನು ಬಾತ್‌ರೂಂಗೆ ಎಳೆದೊಯ್ದು ಹಾಕುತ್ತಿದ್ದೆ, ಅಲ್ಲಿ ರಕ್ತ ಹರಿದು ಹೋದ ನಂತರ ಏಳು ಗೋಣಿಚೀಲಗಳಲ್ಲಿ ಒಂದು ಶವವನ್ನು ತುಂಬಿ ವಾಸನೆ ಬರದಂತೆ ರಾಸಾಯನಿಕ ವಸ್ತುವನ್ನು ಸಿಂಪಡಿಸಿ ಕಾರಿನಲ್ಲಿ ಹಾಕಿಕೊಂಡು ಹೋಗಿ ಬಿಸಾಡುತ್ತಿದ್ದೆ ಎಂದು ವಿಚಾರಣೆ ಸಂದರ್ಭದಲ್ಲಿ ಆರೋಪಿ ತಿಳಿಸಿದ್ದಾನೆ ಎಂದು ಗೊತ್ತಾಗಿದೆ.
