Homeರಾಜ್ಯಸಚಿವ ಶಿವಲಿಂಗೇಗೌಡ ಹಾಗೂ ಹಾಸನ ಡಿಸಿ ವಿರುದ್ಧ ಲಂಚಾರೋಪ ಮಾಡಿದ ಹೆಚ್ಡಿಕೆ : ವಾಟ್ಸಾಪ್ ಚಾಟ್...

ಸಚಿವ ಶಿವಲಿಂಗೇಗೌಡ ಹಾಗೂ ಹಾಸನ ಡಿಸಿ ವಿರುದ್ಧ ಲಂಚಾರೋಪ ಮಾಡಿದ ಹೆಚ್ಡಿಕೆ : ವಾಟ್ಸಾಪ್ ಚಾಟ್ ರಿಲೀಸ್

ಹಾಸನ,ನ.8- ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌‍ಪಟೇಲ್‌ ಹಾಗೂ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ವಿರುದ್ಧ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಲಂಚದ ಆರೋಪ ಮಾಡಿದ್ದಾರೆ.ಜಲ್ಲಿ ಕ್ರಷರ್‌ ಪರವಾನಗಿ ನೀಡುವುದು ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪವಿದೆ ಎಂದರು.

ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾಧಿಕಾರಿ ಆಪ್ತ ಸಹಾಯಕ ಶಶಿಕಿರಣ್‌ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವಿರುವ ದಾಖಲೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಮಧ್ಯವರ್ತಿ ಜೊತೆ ಶಶಿಕಿರಣ್‌ ನಡೆಸಿರುವ ವಾಟ್ಸ್ಯಾಪ್‌ ಚಾಟ್‌ನಲ್ಲಿ ಕೆ.ಎಂ.ಶಿವಲಿಂಗೇಗೌಡ, ಲತಾಕುಮಾರಿ, ಶ್ರೇಯಸ್‌‍ಪಟೇಲ್‌ ಸೇರಿದಂತೆ ಹಲವು ಅಧಿಕಾರಿಗಳ ಹೆಸರುಗಳು ಉಲ್ಲೇಖವಿದೆ ಎಂದು ಆರೋಪ ಮಾಡಿದರು.

ಮಧ್ಯವರ್ತಿ ಜೊತೆ ಶಶಿಕಿರಣ್‌ ಎಂಬುವರು ನಡೆಸಿದ್ದಾರೆ ಎನ್ನಲಾಗಿದ್ದ ವಾಟ್ಸ್ಯಾಪ್‌ ಚಾಟ್‌ನಲ್ಲಿ ಕ್ರಷರ್‌ಗಳಿಗೆ ಪರವಾನಗಿ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಲಂಚದ ಬಗ್ಗೆ ಪ್ರಸ್ತಾಪವಾಗಿದೆ ಎಂದು ಹೇಳಿದರು. ಅಲ್ಲದೆ, ಅರಸೀಕೆರೆ ತಹಸೀಲ್ದಾರ್‌ ಸಂತೋಷ್‌, ಹಾಸನ ತಹಸೀಲ್ದಾರ್‌ ಗೀತಾ ಅವರುಗಳ ಹೆಸರು ಕೂಡಾ ವಾಟ್ಸ್ಯಾಪ್‌ ಚಾಟ್‌ನಲ್ಲಿ ಉಲ್ಲೇಖವಾಗಿವೆ. ಲಕ್ಷ ಲಕ್ಷ ಲಂಚ ಕೇಳಲಾಗಿದೆ ಎಂದು ಆರೋಪಿಸಿದರು.

ಮೊಬೈಲ್‌ ವಾಟ್ಸ್ಯಾಪ್‌ ಚಾಟ್‌ ನಡೆದಿರುವ ಫೋನ್‌ಗಳನ್ನು ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರು ಸೀಜ್‌ ಮಾಡಿ ತನಿಖೆ ನಡೆಸುತ್ತಾರೆಯೇ? ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಒಂದು ರೂಪಾಯಿ ಲಂಚ ಕೇಳಿದರೂ ನನಗೆ ಫೋನ್‌ ಮಾಡಿ ಎಂದು ಹೇಳುತ್ತಾರೆ. ಇದಕ್ಕೆಲ್ಲಾ ಏನು ಉತ್ತರ ಕೊಡುತ್ತಾರೆ. ಇದೊಂದೇ ಜಿಲ್ಲೆ ಅಲ್ಲ. ರಾಜ್ಯದೆಲ್ಲೆಡೆ ಇಂತಹ ವಾತಾವರಣವಿದೆ. ಕಲಬುರಗಿ ಜಿಲ್ಲೆಯಿಂದಲೂ ಇಂತಹ ವಿಚಾರದ ಬಗ್ಗೆ ಫೋನ್‌ ಕರೆ ಬಂದಿತ್ತು. ಆರೋಗ್ಯ ಸಮಸ್ಯೆಯಿಂದ ಅಲ್ಲಿಗೆ ಹೋಗಿಲ್ಲ. ಹಿಂದಿನ ಸರ್ಕಾರದ ವಿರುದ್ಧ ಶೇ. 40 ರಷ್ಟು ಕಮಿಷನ್‌ ಆರೋಪ ಮಾಡಿದ್ದರು. ಇದು ಯಾವ ಸರ್ಕಾರ ? ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯವರ ಹೇಳಿಕೆಗಳು ಕೇವಲ ಘೋಷಣೆಗೆ ಸೀಮಿತವಾಗದೇ ಅನುಷ್ಠಾನವಾಗಬೇಕು. ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆದರೆ ಪಶು ಆಹಾರಗಳ ಬೆಲೆಗಳು ದುಬಾರಿಯಾಗಿವೆ. ಒಂದು ತಿಂಗಳ ನಂತರ ಹಾಲಿನ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಚರ್ಚೆ ಮಾಡುತ್ತೇನೆ ಎಂದರು.ಜಲಾಶಯಗಳ ನೀರನ್ನು ಬಿಡದೆ ಬೆಳೆಗಳು ಒಣಗುತ್ತಿವೆ. ಎಷ್ಟರ ಮಟ್ಟಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದೀರಿ? ಎಂದು ಪ್ರಶ್ನಿಸಿದರು.

ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ದುಬಾರಿಯಾದ ಹಿನ್ನೆಲೆಯಲ್ಲಿ ಖಾಸಗಿ ಡೇರಿಗಳಿಗೆ ಅನುಕೂಲವಾಗುತ್ತಿದೆ. ಗ್ರಾಹಕರಿಗೆ ಹೊರೆಯಾಗಿದೆ. ಒಂದು ಕೆಜಿ ಅಕ್ಕಿ ಬೆಲೆ 100 ರೂ. ದಾಟಿದೆ. ಕೇಂದ್ರ ಸರ್ಕಾರ ಅಕ್ಕಿ ನೀಡುವುದರಿಂದ ಜನ ಉಸಿರಾಡುವಂತಾಗಿದೆ. ಈ ಹಿಂದೆ ಶೇ.33 ರಷ್ಟು ಬಸ್‌‍ ದರ ಏರಿಕೆ ಮಾಡಿದಾಗ ತೈಲ ಬೆಲೆ ಹೆಚ್ಚಾಗಿರಲಿಲ್ಲ. 10 ಸಾವಿರ ಕೋಟಿ ರೂ.ಗಳಷ್ಟು ಸಾರಿಗೆ ಇಲಾಖೆಯಲ್ಲಿ ಸಾಲ ಮಾಡಿಒಕೊಂಡಿದ್ದು, ಅದರ ಹೊರೆಯನ್ನು ಜನರ ಮೇಲೆ ಹೇರಿದ್ದಾರೆ. ಬಡವರು, ಕಾರ್ಮಿಕರ ಬದುಕು ಕಷ್ಟವಾಗಿದೆ. ಗೃಹಲಕ್ಷ್ಮಿ ಹಣವನ್ನು ಡೈವರ್ಟ್‌ ಮಾಡಿದ್ದಾರೆ. ನಮ ಗ್ಯಾರಂಟಿಯನ್ನು ಅಮೆರಿಕ ಅಧ್ಯಕ್ಷರು ಜಾರಿ ಮಾಡಿದ್ದಾರೆ ಎಂದು ಹೇಳುತ್ತಿದ್ದರು. ಮುಂದೆ ಅಮೆರಿಕದಲ್ಲಾಗಿರುವ ಪರಿಸ್ಥಿತಿಯೇ ಕರ್ನಾಟಕದಲ್ಲಿಯೂ ಆಗುತ್ತದೆ ಎಂದು ಅವರು ಟೀಕಿಸಿದರು.

ಮೂರೂವರೆ ವರ್ಷದಿಂದ ಆರ್ಥಿಕ ಶಿಸ್ತನ್ನು ರಾಜ್ಯದಲ್ಲಿ ಸರಿಯಾಗಿ ಪಾಲಿಸುತ್ತಿಲ್ಲ. ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಇದಕ್ಕೆಲ್ಲಾ ಸೂಕ್ತ ಉತ್ತರ ನೀಡಿ ಎಂದ ಅವರು, ಪುರದಮ ದೇವಸ್ಥಾನಕ್ಕೆ ಯಾವ ಕಾರಣಕ್ಕೆ ಹೋಗುತ್ತಿದ್ದಾರೋ ಗೊತ್ತಿಲ್ಲ, ಯಾರನ್ನು ತೆಗೆಯಬೇಕೋ? ಅಥವಾ ಯಾರನ್ನು ಉಳಿಸಬೇಕೋ ಎಂಬ ಉದ್ದೇಶವಿದೆಯೋ? ನಮಗೆ ಗೊತ್ತಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ಶಾಸಕ ಸ್ವರೂಪ್‌ ಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ಎಸ್‌‍.ಎಲ್‌.ಭೋಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್‌, ಜೆಡಿಎಸ್‌‍ ಜಿಲಾ ಅಧ್ಯಕ್ಷ ನಟರಾಜ್‌, ಪಕ್ಷದ ವಕ್ತಾರ ರಘು ಹೊಂಗೆರೆ ಉಪಸ್ಥಿತರಿದ್ದರು.

RELATED ARTICLES

Latest News