ನವದೆಹಲಿ, ಜೂ.21- ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಭಾರೀ ದಂಡ ವಿಧಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಇಲ್ಲದೆ ಅಥವಾ ಅನಧಿಕೃತವಾಗಿ ಪ್ರಯಾಣ ಮಾಡುವುದು ಈಗ ತುಂಬಾ ದುಬಾರಿಯಾಗುತ್ತಿದೆ. ಈವರೆಗೆ ಇದ್ದ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಈಗ ದುಪ್ಪಟ್ಟು ದಂಡ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.ಇದುವರೆಗೆ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಕನಿಷ್ಠ 250 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಅದನ್ನು ದುಪ್ಪಟ್ಟುಗೊಳಿಸಲಾಗಿದೆ.
ಇದೀಗ ಟಿಕೆಟ್ ಇಲ್ಲದೇ ಪ್ರಯಾಣಿಸಿದರೆ ಕನಿಷ್ಠ 500 ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಇದು ರೈಲ್ವೆ ಆದಾಯ ಹೆಚ್ಚಿಸುವುದಕ್ಕೂ, ಪ್ರಯಾಣಿಕರ ನಡುವೆ ಶಿಸ್ತು ಕಾಯ್ದುಕೊಳ್ಳುವುದಕ್ಕೂ ಮಾಡಿದ ಬದಲಾವಣೆಯಾಗಿದೆ. ಈ ಹೊಸ ನಿಯಮವು ರೈಲ್ವೇ ಆಕ್ಟ್ 1989ನ ಸೆಕ್ಷನ್ 137 ಮತ್ತು 138 ಅಡಿಯಲ್ಲಿ ಜನ ವಿಶ್ವಾಸ ಆಕ್ಟ್ 2026ರ ಮೂಲಕ ಜಾರಿಗೊಳ್ಳುತ್ತಿದೆ. ದೂರ ಹೆಚ್ಚಿದರೆ ದಂಡದ ಜೊತೆಗೆ ಟಿಕೆಟ್ ದರವೂ ಹೆಚ್ಚಾಗುತ್ತದೆ. ಇದು ಸಾಮಾನ್ಯ ಪ್ರಯಾಣಿಕರಿಗೆ ಮಾತ್ರವಲ್ಲ, ಜನರಲ್ ಟಿಕೆಟ್ ಇದ್ದರೂ ಸ್ಲೀಪರ್ ಅಥವಾ ಎಸಿ ಕೋಚ್ಗಳಲ್ಲಿ ಪ್ರಯಾಣಿಸಿದರೂ ಅನ್ವಯವಾಗುತ್ತದೆ. ರೈಲ್ವೆಗೆ ಟಿಕೆಟ್ ರಹಿತ ಪ್ರಯಾಣದಿಂದ ಪ್ರತಿ ವರ್ಷ ಕೋಟಿಗಟ್ಟಲೆ ರೂಪಾಯಿ ನಷ್ಟವಾಗುತ್ತಿದೆ.
ಕೆಲವು ಜನರು ಉದ್ದೇಶಪೂರ್ವಕವಾಗಿ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣಿಸುತ್ತಾರೆ. ಇದರಿಂದ ನಿಜವಾಗಿ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡುವವರಿಗೆ ತೊಂದರೆಯಾಗುತ್ತದೆ. ರೈಲುಗಳು ತುಂಬಿ ತುಂಬಿ ಹೋಗುತ್ತವೆ. ಹೀಗಾಗಿ ಪ್ರಾಮಾಣಿಕವಾಗಿ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ ಸೀಟು ಸಿಗುವುದಿಲ್ಲ. ಈ ಸಮಸ್ಯೆಯನ್ನು ತಡೆಯಲು ಸರ್ಕಾರ ಈ ಕಠಿಣ ನಿಯಮ ತಂದಿದೆ. ಇದು ಸುಮಾರು 13 ವರ್ಷಗಳ ನಂತರದ ದೊಡ್ಡ ಬದಲಾವಣೆಯಾಗಿದೆ. ರೈಲ್ವೆಗಳಲ್ಲಿ ಹಲವು ರೀತಿಯ ದಂಡ ಮಹಿಳಾ ಕೋಚ್ಗೆ ಪುರುಷರು ಅನಧಿಕೃತವಾಗಿ ಹೋದರೆ 2,500 ರೂ.ವರೆಗೆ ದಂಡ, ರೈಲು ನಿಲ್ದಾಣ ಅಥವಾ ರೈಲಿನಲ್ಲಿ ಅನುಮತಿ ಇಲ್ಲದೆ ವ್ಯಾಪಾರ, ಹಾಕಿಂಗ್ ಅಥವಾ ಭಿಕ್ಷೆ ಬೇಡಿದರೆ 2,000 ರೂ. ದಂಡ, ಇತರೆ ತೊಂದರೆ ಕೊಡುವ ಕ್ರಮಗಳಿಗೆ 1,000 ರೂ. ದಂಡ, ಗಂಭೀರ ಪ್ರಕರಣಗಳಲ್ಲಿ ಆರು ತಿಂಗಳುವರೆಗೆ ಜೈಲು ಶಿಕ್ಷೆಯೂ ಆಗಬಹುದು.
