Homeರಾಜ್ಯಇಂದಿರಾ ಕಿಟ್‌ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ

ಇಂದಿರಾ ಕಿಟ್‌ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ

Indira Kit program faces hurdles at the beginning

-ಬಿ.ಎಸ್‌‍.ರಾಮಚಂದ್ರ
ಬೆಂಗಳೂರು, ಮೇ 9- ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಪೋಷಕಾಂಶ ಪದಾರ್ಥ ವಿತರಿಸುವ ಇಂದಿರಾ ಕಿಟ್‌ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಆರಂಭದಲ್ಲೇ ಕೆಲ ವಿಘ್ನ ಎದುರಾಗಿದೆ.
ಯೋಜನೆ ಅನುಷ್ಠಾನಕ್ಕಾಗಿ ಆಹಾರ ಇಲಾಖೆ ಅಧಿಕಾರಿಗಳು ಏಳೆಂಟು ತಿಂಗಳಿಂದ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಆದರೆ, ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಖರೀದಿಗಾಗಿ ಕರೆದಿರುವ ಟೆಂಡರ್‌ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ.

ಕೆಲ ಸಚಿವರು ಈ ಟೆಂಡರ್‌ಅನ್ನು ನಿರ್ದಿಷ್ಟ ಕಂಪನಿಗೆ ಕೊಡಿಸಲು ಒಳಗೊಳಗೆ ಪ್ರಯತ್ನ ನಡೆಸುತ್ತಿದ್ದರೆ, ಇನ್ನೂ ಕೆಲವರು ಬೇಕಾದವರಿಗೆ ಟೆಂಡರ್‌ ಹಂಚಿಕೆ ಮಾಡುತ್ತಿರುವ ಬಗ್ಗೆ ಗುರುತರ ಆರೋಪ ಕೇಳಿಬಂದಿವೆ. ಹಾಗಾಗಿ, ಟೆಂಡರ್‌ ಲಾಬಿಯಿಂದಾಗಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಗ್ರಹಣ ಬಡಿಯುವಂತಾಗಿದೆ.

ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ, 2023ರ ಜು.10ರಿಂದ ಜಾರಿಗೆ ತಂದಿತ್ತು. 2023ರ ಜು.10ರಿಂದ 2025ರ ಜನವರಿವರೆಗೆ ಲಾನುಭವಿಗಳ ಖಾತೆಗೆ ಡಿಬಿಟಿ ಮುಖೇನ ಹಣ ಹಾಕಲಾಗುತ್ತಿತ್ತು. ಕಡಿಮೆ ದರಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರವು ಒಪ್ಪಿದ್ದ ಕಾರಣ 2025ರ ಫೆಬ್ರವರಿಯಿಂದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ನ ಪ್ರತಿ ಸದಸ್ಯನಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ.

ಕಾರ್ಡ್‌ದಾರರಿಗೆ ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ಹೊಂದಿರುವ ಕಿಟ್‌ ವಿತರಿಸುವ ಸಲುವಾಗಿ ಇಲಾಖೆ, ಏಳೆಂಟು ತಿಂಗಳಿಂದ ಯೋಜನೆ ಅನುಷ್ಠಾನಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದೆ. ಅಲ್ಲದೆ, ಸಚಿವ ಕೆ.ಎಚ್‌.ಮುನಿಯಪ್ಪ, ಯೋಜನೆ ಜಾರಿ ಸಂಬಂಧಿಸಿದಂತೆ ನಾಲ್ಕೈದು ಬಾರಿ ಹೇಳಿಕೆ ನೀಡಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಬಣ್ಣದ ಆಧಾರದಲ್ಲಿ ಕಿಟ್‌ ವಿತರಣೆ:
ಇಂದಿರಾ ಕಿಟ್‌ ವಿತರಣೆಗಾಗಿ ಇಲಾಖೆ, ರಾಜ್ಯದ 31 ಜಿಲ್ಲೆಗಳನ್ನು ಐದು ವಿಭಾಗವಾಗಿ ವಿಗಂಡಿಸಿದೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಗದಗ, ಹಾವೇರಿ ಮತ್ತು ಧಾರವಾಡಕ್ಕೆ (ವಿಭಾಗ-1) ನೇರಳೆ ಬಣ್ಣದ ಬ್ಯಾಗ್‌ ವಿತರಿಸಲಾಗುತ್ತದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿಗೆ ನೀಲಿ ಬಣ್ಣದ ಕಿಟ್‌ ಸರಬರಾಜು ಮಾಡಲಾಗುತ್ತದೆ.

ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಕಾರ್ಡ್‌ದಾರರಿಗೆ( ವಿಭಾಗ-3) ಬಿಳಿ ಬಣ್ಣದ ಬ್ಯಾಗ್‌ ಕೊಡಲಾಗುತ್ತದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡಕ್ಕೆ ಹಳದಿ ಬಣ್ಣದ ಬ್ಯಾಗ್‌ ಮತ್ತು ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿಗೆ ತಿಳಿ ನೀಲಿ ಬಣ್ಣದ ಇಂದಿರಾ ಕಿಟ್‌ ವಿತರಿಸಲಾಗುತ್ತದೆ.

ಇಲಾಖೆಗೆ ಹಲವು ಸವಾಲು?
*ಸದಸ್ಯವಾರು ಆಹಾರಧಾನ್ಯ ಪ್ಯಾಕಿಂಗ್‌ ಮಾಡುವುದಕ್ಕೆ ಬೇಕಿದೆ ಹೆಚ್ಚಿನ ಸಮಯ.
*ಖರೀದಿಸಿದ ಪದಾರ್ಥವನ್ನು ಪ್ರತ್ಯೇಕವಾಗಿ ಪ್ಯಾಕಿಂಗ್‌ ಮಾಡುವುದಕ್ಕೆ ದೊಡ್ಡ ಗೋದಾಮು ಬೇಕು.
*ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಅಯೋಡಿನ್‌ ಉಪ್ಪು ಖರೀದಿಗಾಗಿ ಪ್ರತ್ಯೇಕವಾಗಿ ಕರೆದಿರುವ ಟೆಂಡರ್‌ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ ) ಕಾಯ್ದೆ ಅನ್ವಯ ನಿರ್ದಿಷ್ಟ ಸಮಯದಲ್ಲೇ ಮುಗಿಸುವ ಸವಾಲು.
*ಅರ್ಹತೆ ಹೊಂದಿರುವ ಕಂಪನಿಗೆ ಪದಾರ್ಥ ಪೂರೈಸಲು ಕಾರ್ಯಾದೇಶ ಪತ್ರ ನೀಡಬೇಕು.
*ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆಯದಂತೆ ನಿಗಾ ವಹಿಸುವುದು.
*ದುರ್ಬಳಕೆ ತಡೆಗೆ ಕಿಟ್‌ ಮೇಲೆ ಕ್ಯೂ ಆರ್‌ ಕೋಡ್‌ ಅಳವಡಿಸಬೇಕು.
*ಗೋಡೌನ್‌ನಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಿಟ್‌ ಸರಬರಾಜುವಿಗೆ ಖಾಸಗಿ ಏಜೆನ್ಸಿಗೆ ಹೊಣೆ ವಹಿಸುವುದು .
*ಯೋಜನೆ ಜಾರಿಯಾದ ಬಳಿಕ ಕನಿಷ್ಠ ಪಕ್ಷ 6 ತಿಂಗಳವರೆಗೆ ಯಾವುದೇ ಲೋಪವಾಗದಂತೆ ವಿಶೇಷ ಗಮನ ಕೊಡುವುದು.
*ಪ್ರತಿ ತಿಂಗಳು 1.25 ಕೋಟಿ ಕಾರ್ಡ್‌ಗಳಿಗೆ 57,521 ಮೆಟ್ರಿಕ್‌ ಟನ್‌ ಆಹಾರ ಪದಾರ್ಥ ಪೂರೈಕೆ.

RELATED ARTICLES

Latest News